ಕೊರೋನ ವೈರಸ್ ಉಗಮದ ತನಿಖೆ: ವುಹಾನ್ ಆಹಾರ ಮಾರುಕಟ್ಟೆಗೆ ಡಬ್ಲ್ಯುಎಚ್‌ಓ ತಂಡದ ಭೇಟಿ

ವುಹಾನ್,ಜ.31: ಜಗತ್ತನ್ನೇ ತಲ್ಲಣಗೊಳಿಸಿರುವ ಕೊರೋನ ವೈರಸ್ ಸೋಂಕಿನ ಮೂಲದ ಬಗ್ಗೆ ಸಮಗ್ರ ತನಿಖೆ ನಡೆಸುತ್ತಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಓ) ಯ ತಂಡವು ರವಿವಾರ ಚೀನಾದ ವುಹಾನ್ ನಗರದಲ್ಲಿರುವ ಆಹಾರ ವಿತರಣೆ ಕೇಂದ್ರಕ್ಕೆ ಭೇಟಿ ನೀಡಿ ದೆ. ಮಾರಣಾಂತಿಕ ಕೊರೋನ ವೈರಸ್ ಜಗತ್ತಿನಲ್ಲೇ ಪ್ರಪ್ರಥಮವಾಗಿ ವುಹಾನ್ ನಗರದಲ್ಲಿ 2019ರಲ್ಲಿ ಪತ್ತೆಯಾಗಿತ್ತು. ಆನಂತರ ವುಹಾನ್ ನಗರದಲ್ಲಿ ಸತತವಾಗಿ 76 ದಿನಗಳ ಕಾಲ ಲಾಕ್‌ಡೌನ್ ಹೇರಲಾಗಿತ್ತು.
ವುಹಾನ್ ನಗರದ ಅತಿ ದೊಡ್ಡ ಹಸಿ ಮಾಂಸದ ಮಾರುಕಟ್ಟೆಗಳಲ್ಲೊಂದಾದ ಬೈಶಾಝೌ ಮಾರುಕಟ್ಟೆಯ ವಿವಿಧ ವಿಭಾಗಗಳಿಗೆ ತಂಡದ ಸದಸ್ಯರು ಭೇಟಿ ನೀಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿವೆ. ಚೀನಿ ಅಧಿಕಾರಿಗಳು ಹಾಗೂ ಸರಕಾರಿ ಪ್ರತಿನಿಧಿಗಳ ದೊಡ್ಡ ಗುಂಪು ಅವರ ಜೊತೆಗಿರುವುದು ಕಂಡುಬಂದಿದೆ.
ಪಶುವೈದ್ಯಕೀಯ,ವೈರಾಣುಶಾಸ್ತ್ರ,ಆಹಾರ ಸುರಕ್ಷತೆ ಹಾಗೂ ಸಾಂಕ್ರಾಮಿಕ ರೋಗ ಶಾಸ್ತ್ರ ಪರಿಣಿತರು ಡಬ್ಲುಎಚ್‌ಓ ತಂಡದಲ್ಲಿದ್ದರು. ರೋಗ ಪತ್ತೆಯಾದ ಆರಂಭದಲ್ಲಿ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಿದ್ದ ಎರಡು ಆಸ್ಪತ್ರೆಗಳನ್ನು ಕೂಡಾ ನಿಯೋಗವು ಸಂದರ್ಶಿಸಿತು. ಕೋವಿಡ್-19ನ ಆರಂಭಿಕ ಇತಿಹಾಸದ ಕುರಿತಾಗಿ ಸ್ಥಾಪಿಸಲಾಗಿರುವ ವಸ್ತುಸಂಗ್ರಹಾಲಯವನ್ನೂ ತಂಡವು ಭೇಟಿ ಕೊಟ್ಟಿತು.ಕೋವಿಡ್ 19 ಸಾಂಕ್ರಾಮಿಕದ ಆರಂಭದಲ್ಲಿ ಹಲವಾರು ಪ್ರಕರಣಗಳ ಜೊತೆ ನಂಟು ಹೊಂದಿರುವ ಹುವಾನಾನ್ ಸಮುದ್ರ ಆಹಾರ ಮಾರುಕಟ್ಟೆಯನ್ನೂ ತಂಡವು ಸಂದರ್ಶಿಸಲಿದೆ. ವುಹಾನ್‌ನ ರೋಗ ನಿಯಂತ್ರಣ ಕೇಂದ್ರ ಸೇರಿದಂತೆ ವಿವಿಧ ಸಂಸ್ಥಾಪನೆಗಳು ಹಾಗೂ ಪ್ರಯೋಗಶಾಲೆಗಳು ಮತ್ತು ವುಹಾನ್ ವೈರಾಣು ಸಂಸ್ಥೆಗೂ ತಂಡವು ಭೇಟಿ ನೀಡುವ ಉದ್ದೇಶನ್ನು ಹೊಂದಿದೆ.







