ಮೇ ಗಡುವಿನ ಬಳಿಕವೂ ಅಫ್ಘಾನ್‌ನಲ್ಲಿ ವಿದೇಶಿ ಪಡೆಗಳು ಉಳಿದುಕೊಳ್ಳಲಿವೆ: ನ್ಯಾಟೋ ಬಹಿರಂಗ

ಇಸ್ಲಾಮಾಬಾದ್,ಜ.31: ತಾಲಿಬಾನ್ ಬಂಡುಕೋರರ ಜೊತೆ ಅಮೆರಿಕವು ಮಾಡಿಕೊಂಡ ಒಡಂಬಡಿಕೆಯಂತೆ ಅಫ್ಘಾನಿಸ್ತಾನದಿಂದ ಅಂತಾರ್ ರಾಷ್ಟ್ರೀಯ ಪಡೆಗಳ ನಿರ್ಗಮನಕ್ಕೆ ಮೇ ತಿಂಗಳು ಅಂತಿಮ ಗಡುವಾಗಿದ್ದರೂ, ಆನಂತರವೂ ಅವು ಆ ದೇಶದಲ್ಲಿ ಉಳಿದುಕೊಳ್ಳುವ ಯೋಜನೆಯನ್ನು ಹೊಂದಿವೆಯೆಂದು ನ್ಯಾಟೋ ಸೇನಾ ಮೈತ್ರಿಕೂಟದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಪಡೆಗಳ ಈ ನಿರ್ಧಾರದಿಂದಾಗಿ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಜೊತೆಗಿನ ಉದ್ವಿಗ್ನತೆ ಇನ್ನಷ್ಟು ಉಲ್ಬಣಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಅಮೆರಿಕ ನೇತೃತ್ವದ ಅಂತರ್ ರಾಷ್ಟ್ರೀಯ ಪಡೆಗಳು ಅಫ್ಘಾನಿಸ್ತಾನದಿಂದ ಸಂಪೂರ್ಣ ನಿರ್ಗಮಿಸಬೇಕೆಂದು ತಾಲಿಬಾನ್ ಆಗ್ರಹಿಸುತ್ತಿದೆ.
ಎಪ್ರಿಲ್ ಕೊನೆಯೊಳಗೆ ನ್ಯಾಟೊ ಪಡೆಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಲಾಗುವುದಿಲ್ಲ ಎಂದು ಅಧಿಕಾರಿಯೊಬ್ಬರು ರಾಯ್ಟರ್ಸ್ ಸುದ್ದಿಸಂಸ್ಥೆಗೆ ಶನಿವಾರ ತಿಳಿಸಿದ್ದಾರೆ.
‘‘ಅಮೆರಿಕದಲ್ಲಿ ನೂತನ ಆಡಳಿತವಿರುವುದರಿಂದ ನೀತಿಗಳಲ್ಲಿ ಬದಲಾವಣೆಗಳಾಗುತ್ತವೆ. ಸೇನಾಪಡೆಗಳನ್ನು ಅವಸರವಸರವಾಗಿ ಹಿಂತೆಗೆದುಕೊಳ್ಳಲಾಗುತ್ತಿದೆಯೆಂಬ ಭಾವನೆ ಉಂಟಾಗಿದ್ದು ನಾವು ಅದಕ್ಕೆ ಸ್ಪಂದಿಸಬೇಕಾಗಿದೆ ಹಾಗೂ ಅಂತರ್ ರಾಷ್ಟ್ರೀಯ ಪಡೆಗಳ ನಿರ್ಗಮನಕ್ಕೆ ಸಂಬಂಧಿಸಿ ಇನ್ನೂ ಹೆಚ್ಚಿನ ಲೆಕ್ಕಾಚಾರದ ಕಾರ್ಯತಂತ್ರವೊಂದನ್ನು ನಾವು ಕಂಡುಹಿಡಿಯಬೇಕಾಗಿದೆ’’ ಎಂದು ಅವರು ಹೇಳಿದ್ದಾರೆ.
ಕಳೆದ ವರ್ಷ ಕತರ್ ರಾಜಧಾನಿ ದೋಹಾದಲ್ಲಿ ತಾಲಿಬಾನ್ ಬಂಡುಕೋರರ ಜೊತೆ ನಡೆಸಿದ ಶಾಂತಿ ಮಾತುಕತೆಯಲ್ಲಿ ಆಗಿನ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆಡಳಿತವು ಮೇ ತಿಂಗಳೊಳಗೆ ಅಫ್ಘಾನಿಸ್ತಾನದಿಂದ ವಿದೇಶಿ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಒಪ್ಪಂದಕ್ಕೆ ಸಹಿಹಾಕಿತ್ತು. ಇದಕ್ಕೆ ಪ್ರತಿಯಾಗಿ ತಾಲಿಬಾನ್ ಬಂಡುಕೋರರು ಕೆಲವೊಂದು ನಿರ್ದಿಷ್ಟ ಸುರಕ್ಷತಾ ಖಾತರಿಗಳನ್ನು ಈಡೇರಿಸಬೇಕಾಗಿತ್ತು.
ಅಫ್ಘಾನಿಸ್ತಾನದಲ್ಲಿ ಪ್ರಸಕ್ತ ಅಮೆರಿಕನ್ ಯೋಧರು ಸೇರಿದಂತೆ 10 ಸಾವಿರಕ್ಕೂ ಅಧಿಕ ಅಂತರ್ ರಾಷ್ಟ್ರೀಯ ಸೈನಿಕರು ನಿಯೋಜಿತರಾಗಿದ್ದಾರೆ.







