ರೈತ ಹೋರಾಟ ದಮನಿಸಬೇಡಿ: ಕೇಂದ್ರಕ್ಕೆ ಮೇಘಾಲಯ ರಾಜ್ಯಪಾಲರ ಎಚ್ಚರಿಕೆ

ಹೊಸದಿಲ್ಲಿ, ಫೆ.1: "ಕೇಂದ್ರ ಸರಕಾರ ರೈತರ ಹೋರಾಟವನ್ನು ದಮನಿಸಬಾರದು; ಬದಲಾಗಿ ಕಳೆದ ಮುಂಗಾರು ಅಧಿವೇಶನದಲ್ಲಿ ಅನುಮೋದನೆ ನೀಡಿದ ಮೂರು ಕೃಷಿ ಮಸೂದೆ ಬಗೆಗಿನ ಅವರ ಕಳಕಳಿಯನ್ನು ಆಲಿಸಬೇಕು" ಎಂದು ಮೇಘಾಲಯ ರಾಜ್ಯಪಾಲ ಸತ್ಯಪಾಲ್ ಮಲಿಕ್ ಕೇಂದ್ರವನ್ನು ಒತ್ತಾಯಿಸಿದ್ದಾರೆ.
"ವಿಶ್ವದ ಎಲ್ಲೇ ಆಗಲಿ ಯಾವುದೇ ಸಮಸ್ಯೆಯನ್ನು ದಮನಿಸುವುದು ಪರಿಹಾರವಲ್ಲ; ಒತ್ತಡ ಹೇರಿದಾಗ ಸ್ವಲ್ಪ ಸಮಯ ಅದು ಕುಗ್ಗಿರಬಹುದು; ಆದರೆ ಬಳಿಕ ಅದು ಇನ್ನಷ್ಟು ದೊಡ್ಡ ಶಕ್ತಿಯಾಗಿ ಹೊರಹೊಮ್ಮುತ್ತದೆ ಎಂಬ ಎಚ್ಚರಿಕೆ ನೀಡುತ್ತಿದ್ದೇನೆ" ಎಂದು ಎಎನ್‌ಐ ಜತೆ ಮಾತನಾಡಿದ ಅವರು ಹೇಳಿದ್ದಾರೆ.
ಕೃಷಿ ಕ್ಷೇತ್ರದಿಂದ ರಾಜಕೀಯ ಕ್ಷೇತ್ರ ಪ್ರವೇಶಿಸಿದ ತಮ್ಮ ಸುದೀರ್ಘ ಪಯಣದ ಮೆಲುಕು ಹಾಕಿದ ಅವರು, ರೈತರ ಸಮಸ್ಯೆಗಳ ಅರಿವು ತಮಗೆ ಇದೆ ಎಂದು ಸ್ಪಷ್ಟಪಡಿಸಿದರು. "ದೇಶದ ಹಿತಾಸಕ್ತಿಯ ದೃಷ್ಟಿಯಿಂದ ಈ ಸಮಸ್ಯೆಗೆ ತ್ವರಿತ ಪರಿಹಾರ ಕಂಡುಹಿಡಿಯಬೇಕಿದೆ. ರೈತರ ಕಳಕಳಿಯನ್ನು ಸರಕಾರ ಆಲಿಸಬೇಕು ಎಂದು ಒತ್ತಾಯಿಸುತ್ತಿದ್ದೇನೆ. ಉಭಯ ಪಕ್ಷಗಳು ಜವಾಬ್ದಾರಿಯತವಾಗಿ ಚರ್ಚೆ ನಡೆಸಬೇಕು" ಎಂದು ಸಲಹೆ ಮಾಡಿದರು.
ದಿಲ್ಲಿ ಗಡಿಯಲ್ಲಿ ಎರಡು ತಿಂಗಳಿಂದ ನಡೆಯುತ್ತಿರುವ ರೈತ ಚಳವಳಿಯನ್ನು ಉಲ್ಲೇಖಿಸಿ, ಸರಕಾರ ಉದಾರತೆ ತೋರಿ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸಮಸ್ಯೆಗೆ ಪರಿಹಾರ ಕಂಡುಹಿಡಿಯಬೇಕು. 60 ದಿನಗಳ ಕಾಲ ರೈತರು ತಮ್ಮ ಹೊಲಗಳಿಂದ ದೂರ ಇದ್ದು, ಅವರ ಕುಟುಂಬದವರು ದಿಲ್ಲಿ ಮತ್ತು ಮನೆ ಮಧ್ಯೆ ಅಲೆದಾಡುತ್ತಿದ್ದಾರೆ. ಎಲ್ಲ ಕೃಷಿ ಕೆಲಸಗಳು ಸ್ಥಗಿತಗೊಂಡಿವೆ. ರೈತರಿಗೆ ಯಾವ ಭದ್ರತೆಯೂ ಇಲ್ಲ. ಸರಕಾರಕ್ಕೆ ತನ್ನದೇ ಬದ್ಧತೆಗಳಿವೆ. ಆದರೆ ಇಲ್ಲಿ ಸರಕಾರದ ಪಾತ್ರವೇ ಪ್ರಮುಖ. ಪ್ರತಿಯೊಂದೂ ಸರಕಾರದ ಕೈಯಲ್ಲೇ ಇದೆ. ಶ್ರೇಷ್ಠತೆಯನ್ನು ಪ್ರದರ್ಶಿಸಿ ರೈತರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸಮಸ್ಯೆ ಬಗೆಹರಿಸಬೇಕು" ಎಂದು ಸೂಚಿಸಿದರು.







