ಈ ಬಾರಿ ಕಾಗದ-ರಹಿತ ಬಜೆಟ್: ಟ್ಯಾಬ್ ಬಳಸಿ ಬಜೆಟ್ ಮಂಡಿಸಲಿರುವ ನಿರ್ಮಲಾ ಸೀತಾರಾಮನ್

Photo: Twitter(@ndtv)
ಹೊಸದಿಲ್ಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಲಿರುವ ಬಜೆಟ್ 2021, ಹಿಂದಿನ ಬಜೆಟ್ಗಳಿಗಿಂತ ಒಂದು ವಿಧದಲ್ಲಿ ಭಿನ್ನವಾಗಿರಲಿದೆ. ವಿತ್ತ ಸಚಿವೆಯಾಗಿ ಮೂರನೇ ಬಾರಿ ಬಜೆಟ್ ಮಂಡಿಸಲಿರುವ ನಿರ್ಮಲಾ ಸೀತಾರಾಮನ್ ಈ ಬಾರಿ ಕಾಗದ-ರಹಿತ ಬಜೆಟ್ ಮಂಡಿಸಲಿದ್ದು, ಈ ಬಾರಿ ಟ್ಯಾಬ್ ನಿಂದಲೇ ಬಜೆಟ್ ಪ್ರಸ್ತಾವನೆಗಳನ್ನು ಓದಲಿದ್ದಾರೆ.
ಇಂದು ಬೆಳಿಗ್ಗೆ ವಿತ್ತ ಸಚಿವೆ ಬಜೆಟ್ ಪ್ರಸ್ತಾವನೆಗಳನ್ನು ಹೊಂದಿದ ಟ್ಯಾಬ್ ಒಂದನ್ನು ರಾಷ್ಟೀಯ ಲಾಂಛನ ಹೊಂದಿದ ಕೆಂಪು ಕೇಸ್ ಒಂದರಲ್ಲಿ ಹಿಡಿದುಕೊಂಡಿದ್ದು ಕಾಣಿಸಿದೆ.
ಈ ಬಾರಿಯ ಕಾಗದರಹಿತ ಬಜೆಟ್ ಪ್ರಧಾನಿ ನರೇಂದ್ರ ಮೋದಿಯ ಡಿಜಿಟಿಲ್ ಇಂಡಿಯಾ ಯೋಜನೆಗೆ ಅನುಗುಣವಾಗಿದೆ. ಈಗಾಗಲೇ ಸಚಿವೆ 'ಯೂನಿಯನ್ ಬಜೆಟ್ ಮೊಬೈಲ್ ಆ್ಯಪ್' ಕೂಡ ಬಿಡುಗಡೆಗೊಳಿಸಿದ್ದು ಸಂಸದರು ಹಾಗೂ ಜನಸಾಮಾನ್ಯರಿಗೆ ಬಜೆಟ್ ಕುರಿತು ಸುಲಭವಾಗಿ ಮಾಹಿತಿ ಪಡೆಯಲು ಇದು ಸಹಕಾರಿಯಾಗಲಿದೆ.
ದಶಕಗಳ ಕಾಲ ಭಾರತದ ವಿತ್ತ ಸಚಿವರುಗಳು ಬಜೆಟ್ ಕಡತಗಳನ್ನು ಬ್ರೀಫ್ ಕೇಸ್ನಲ್ಲಿ ತರುತ್ತಿದ್ದರೆ 2019ರಲ್ಲಿ ಈ ಪದ್ಧತಿಗೂ ಅಂತ್ಯ ಹಾಡಿದ್ದ ನಿರ್ಮಲಾ ಸೀತಾರಾಮನ್ ಸಾಂಪ್ರದಾಯಿಕ ಕೆಂಪು 'ಬಹೀ-ಖಾತ' ಅಥವಾ ಬಟ್ಟೆಯ ಲೆಡ್ಜರ್ನಲ್ಲಿ ಬಜೆಡ್ ಕಡತಗಳನ್ನು ಸಂಸತ್ತಿಗೆ ತಂದಿದ್ದರು.







