ಮ್ಯಾನ್ಮಾರ್ ನಲ್ಲಿ ಮಿಲಿಟರಿ ಕ್ಷಿಪ್ರ ಕ್ರಾಂತಿ; ಒಂದು ವರ್ಷ ತುರ್ತು ಪರಿಸ್ಥಿತಿ ಘೋಷಣೆ

ಆಂಗ್ ಸಾನ್ ಸೂ ಕಿ
ಯಾಂಗೊನ್: ಮ್ಯಾನ್ಮಾರ್ ನಲ್ಲಿ ಸೋಮವಾರ ಮಿಲಿಟರಿ ಕ್ಷಿಪ್ರ ಕ್ರಾಂತಿ ನಡೆದು ದೇಶದ ಸ್ವಯಂಘೋಷಿತ ನಾಯಕಿ ಆಂಗ್ ಸಾನ್ ಸೂ ಕಿ ಅವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ದೇಶದಲ್ಲಿ ತುರ್ತುಪರಿಸ್ಥಿತಿಯನ್ನು ಘೋಷಿಸಲಾಗಿದ್ದು, ಮಿಲಿಟರಿ ದೇಶವನ್ನು ತನ್ನ ಹಿಡಿತಕ್ಕೆ ಒಂದು ವರ್ಷ ಕಾಲ ಪಡೆದುಕೊಂಡಿದೆ.
ದೇಶವನ್ನು ಸುಮಾರು ಐದು ದಶಕಗಳ ಕಾಲ ಆಳಿದ್ದ ಅಲ್ಲಿನ ಮಿಲಿಟರಿ ಹಾಗೂ ನಾಗರಿಕ ಸರಕಾರದ ನಡುವೆ ಕಳೆದ ಹಲವಾರು ವಾರಗಳಿಂದ ಉಂಟಾಗಿದ್ದ ಉದ್ವಿಗ್ನತೆಯ ವಾತಾವರಣ ಇಂದಿನ ಕ್ಷಿಪ್ರ ಕ್ರಾಂತಿಯಲ್ಲಿ ಸಮಾಪನಗೊಂಡಿದೆ. ಕಳೆದ ನವೆಂಬರ್ ತಿಂಗಳಿನಲ್ಲಿ ನಡೆದಿದ್ದ ಚುನಾವಣೆಯಲ್ಲಿ ವ್ಯಾಪಕ ವಂಚನೆ ನಡೆದಿದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಉದ್ವಿಗ್ನತೆ ಸೃಷ್ಟಿಯಾಗಿತ್ತು. ಚುನಾವಣೆಯಲ್ಲಿ ಸೂ ಕಿ ಅವರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರೆಸಿ ಸುಲಭವಾಗಿ ಗೆದ್ದಿತ್ತೆಂಬುದನ್ನು ಇಲ್ಲಿ ಸ್ಮರಿಸಬಹುದು.
ಸೂ ಕಿ ಹಾಗೂ ಅಧ್ಯಕ್ಷ ವಿನ್ ಮೈಇಂಟ್ ಅವರನ್ನು ರಾಷ್ಟ್ರ ರಾಜಧಾನಿ ನೇಪಿಡಾವ್ ಇಲ್ಲಿ ಸೋಮವಾರ ಮುಂಜಾನೆ ವಶಪಡಿಸಿಕೊಳ್ಳಲಾಗಿದೆ. ಚುನಾವಣೆ ನಡೆದ ನಂತರ ಮೊದಲ ಬಾರಿ ಸಂಸತ್ ಅಧಿವೇಶನ ಇಂದು ನಡೆಯುವುದಕ್ಕಿಂತ ಕೆಲವೇ ಗಂಟೆಗಳಿಗೆ ಮುಂಚಿತವಾಗಿ ಈ ಬೆಳವಣಿಗೆ ನಡೆದಿದೆ.
ನಂತರ ತನ್ನ ಸ್ವಂತ ಟೆಲಿವಿಷನ್ ಚಾನೆಲ್ ಮೂಲಕ ದೇಶದ ಮಿಲಿಟರಿ ಒಂದು ವರ್ಷದ ತುರ್ತುಪರಿಸ್ಥಿತಿಯನ್ನು ಘೋಷಿಸಿದೆ.
ದೇಶದ ವಿವಿಧ ಪ್ರಾಂತೀಯ ಸಚಿವರುಗಳನ್ನೂ ಸೇನೆ ವಶಕ್ಕೆ ಪಡೆದುಕೊಂಡಿದೆ ಎಂಬ ಮಾಹಿತಿಯಿದೆ.
ಬಂಧಿತ ನಾಯಕರನ್ನು ಬಿಡುಗಡೆಗೊಳಿಸಿ ದೇಶದಲ್ಲಿ ಪ್ರಜಾಪ್ರಭುತ್ವ ಮರುಸ್ಥಾಪನೆಗೆ ಅಮೆರಿಕ, ಆಸ್ಟ್ರೇಲಿಯ ಸಹಿತ ಹಲವು ರಾಷ್ಟ್ರಗಳು ಇಗಾಗಲೇ ಆಗ್ರಹಿಸಿವೆ.







