‘ಗೋಮಾತಾ ಇಲ್ಲಿ ಸೇಫು, ಆಗ್ಲಿ ಬಿಡು ರೇಪು..': ಕನ್ನಡದ ರ‍್ಯಾಪ್ ಸಿಂಗರ್ ಹರೀಶ್ ಕಾಂಬಳೆ ಹೊಸಹಾಡು 'ರಾಜನೀತಿ' ಬಿಡುಗಡೆ
ಹಾಡಿನ ಮೂಲಕವೇ ಜನಪ್ರತಿನಿಧಿಗಳಿಗೆ ಪ್ರಶ್ನೆಗಳ ಸುರಿಮಳೆ

ಬೆಂಗಳೂರು, ಜ. 30: ‘ನೀ ಬಿಟ್ಟು ಬಿಡು ಜಾತಿ, ನಾ ಬಿಡುವೆ ಮೀಸಲಾತಿ' ಎಂಬ ಕನ್ನಡದ ಪ್ರಪ್ರಥಮ ‘ಜಾತಿ' ವಿರೋಧಿ ‘ರ್‍ಯಾಪ್' ಹಾಡಿನ ಮೂಲಕ ಸಾಮಾಜಿಕ ಜಾಲ ತಾಣದಲ್ಲಿ ನೆಟ್ಟಿಗರ ಮನಗೆದ್ದ ಗಾಯಕ ಹರೀಶ್ ಕಾಂಬಳೆ ‘ರಾಜನೀತಿ' ಎಂಬ ಹೊಸ ರ್‍ಯಾಪ್ ಹಾಡೊಂದನ್ನು ಯೂಟ್ಯೂಬ್‍ನಲ್ಲಿ ಇತ್ತೀಚೆಗೆ ಬಿಡುಗಡೆ ಮಾಡಿದ್ದು, ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಅವರ ಹುಟ್ಟುಹಬ್ಬದ ನೆನಪಿನಲ್ಲಿ ರಾಜನೀತಿ ರ್‍ಯಾಪ್ ಹಾಡನ್ನು ಬಿಡುಗಡೆ ಮಾಡಿರುವ ಹರೀಶ್ ಕಾಂಬಳೆ, ‘ಗೋ ಮಾತಾ ಇಲ್ಲಿ ಸೇಫು ಆಗ್ಲಿ ಬಿಡು ರೇಪು, ಇಲ್ಲಿ ಮಾರ್ಡರ್ ಕೂಡ ಆಚರಣೆ, ಕತ್ತರಿಸಿ ಕೇಕು, ಇದ್ಕೆಲ್ಲ ಯಾರೂ ಕಾರಣ, ಹೇಳಿ ಇದು ಎಂಥ ರಾಜಕಾರಣ' ಎಂದು ಆಳುವ ಜನಪ್ರತಿನಿಧಿಗಳಿಗೆ ಹಾಡಿನ ಮೂಲಕವೇ ಪ್ರಶ್ನೆಗಳ ಸುರಿಮಳೆ ಗೈದಿದ್ದಾರೆ.
ಕೇಳಿ ನನ್ನ ಸ್ಟೋರಿ: ‘ಯಾಕೆ ರಾಜನೀತಿ ಎಲ್ಲಿ ಹಣ ಎಲ್ಲಕ್ಕಿಂತ ಜಾಸ್ತಿ, ಕಪ್ಪುಹಣದಿಂದ ಮಾಡಿದ್ದಾರೆ ಇವ್ರು ಆಸ್ತಿ. ಎಲೆಕ್ಷನ್ ಟೈಮಲಿ ಸ್ವಲ್ಪ ತೋರಿಸತಾರೆ ಪ್ರೀತಿ, ಆಮೇಲೆ ಕಾಣ್ಸಲ್ಲ ಇವ್ರು ನಿಮ್ಗೆ ವರ್ಷಪೂರ್ತಿ. ಹಿಪ್‍ಹಾಪ್(ರ್‍ಯಾಪ್) ಕನ್ನಡದಲ್ಲಿ ಕೇಳು ಹೇಳ್ತಿನ್ ನನ್ನ ಸ್ಟೋರಿ' ಎಂದು ಕಾಂಬಳೆ ಹಾಡಿದ್ದಾರೆ.
‘ಸಮಸ್ಯೆ ಭಯಂಕರ ನಿರಂತರ, ನಮ್ಮಲ್ಲಿ ನಿಮ್ಮಲ್ಲಿ ಅಂತರ, ಆಕಾಶದಷ್ಟು ಎತ್ತರ ನೀವು ಇರುವ ಕಟ್ಟಡ, ಲೂಟಿ ಮಾಡಿ ಪಟ್ಟಣ. ಇಂತ ನೂರೆಂಟು ಪ್ರಕರಣ, ಪ್ರಗತಿ ಇಲ್ಲಿ ಕಡಿಮೆ. ಮಾಡೋದೇ ಜಾಸ್ತಿ ಹಗರಣ... ಹಾ... ಇಕೆಲ್ಲ ಯಾರು ಕಾರಣ...ಹೇಳಿ.. ಇದು ಎಂತ ರಾಜಕಾರಣ...' ಎಂದು ಕಾಂಬಳೆ ಆಡಳಿತ ವ್ಯವಸ್ಥೆಯನ್ನು ಹಾಡಿನ ಮೂಲಕವೇ ಪ್ರಶ್ನಿಸಿದ್ದಾರೆ
ಜನ ಜಾಗೃತಿ: ‘ಮಾಡಿ ನೀವೇ ಸ್ವಲ್ಪ ಯೋಚನೆ, ಇಲ್ಲಾಂದ್ರೆ ಎನ್ ಪ್ರಯೋಜನೆ, ಚುನಾವಣೆ, ನಿಮ್ಮ ಮತ ಚಲಾವಣೆ ಮಾಡುವ ಮುಂಚನೆ, ಚಿಂತನೆ ಮಾಡೋ ವೇಳೆಯಲ್ಲಿ ವಂದೇ ಮಾತು ಇರಲಿ ಈಗ ನಿಮ್ಮ ಗಮನದಲ್ಲಿ ಮಾರಾಟ ನೀವು ಮಾಡಬೇಡಿ ನೋಟಿಗಾಗಿ ವೋಟು, ಹೀಗೆ ಮಾಡಿ ಹೋಗಿದೆ, ಪೂರ್ತಿ ಸಿಸ್ಟಮ್(ವ್ಯವಸ್ಥೆ) ಹದಗೆಟ್ಟು ಇಲ್ಲಿ ಇರಲು ಮನೆ ಇಲ್ಲ, ಆದ್ರೆ ಸಿಟಿ ಹೈಟೆಕು, ಎದ್ದೇಳಿ ನಿಮ್ಮ ಹಕ್ಕಿಗಾಗಿ ಮಾಡಿ ನೋವು ಪೈಟು (ಹೋರಾಟ)' ಎಂದು ಹರೀಶ್ ಕಾಂಬಳೆ ಜನಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ಪ್ರಂಪಚವೇ ಕೊರೋನ ಸೋಂಕಿನ ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭದಲ್ಲಿ ಬಡಕೂಲಿ ಕಾರ್ಮಿಕರು ಅನುಭವಿಸಿದ ನೋವಿಗೆ ಹರೀಶ್ ಕಾಂಬಳೆ, ‘ಮಹಾಮಾರಿ ಕಥೆ' ಎನ್ನುವ ರ್‍ಯಾಪ್ ಹಾಡಿನ ಮೂಲಕವೇ ಮಿಡಿದಿದ್ದು, ಆಡಳಿತ ವ್ಯವಸ್ಥೆಯಲ್ಲಿ ಲೋಪ-ದೋಷಗಳಿಗೆ ಕನ್ನಡಿ ಹಿಡಿಯುವ ಪ್ರಯತ್ನ ಮಾಡಿದ್ದರು. ಇದೀಗ ‘ರಾಜನೀತಿ' ರ್‍ಯಾಪ್ ಹಾಡಿನ ಮೂಲಕ ವ್ಯವಸ್ಥೆ ಸುಧಾರಣೆ ಅವರ ಹೊಸ ಪ್ರಯತ್ನಿಸಿದ್ದು, ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
‘ಸರಕಾರಿ, ಕೆಲ್ಸ ತುಂಬಾ ದುಬಾರಿ, ಎಲ್ಲಿ ಹೋದ್ರು ನಾಳೆ ಬಾ ಅಂತಾರೆ ಅಧಿಕಾರಿ, ನೋಟಿಗಾಗಿ ಬಾಯಿ ತೆರಿತಾರೆ ಭ್ರಷ್ಟಾಚಾರಿ. ಅತ್ಯಾಚಾರಿಗಳಿಗೆ ಇಲ್ಲಿ ಇಲ್ಲ ಯಾವ ಶಿಕ್ಷೆ, ಕಾನೂನಿನವರೆ ನೀಡುತ್ತಾರೆ ಇವರಿಗೆ ಸುರಕ್ಷೆ. ಪ್ರತೀಕ್ಷೆ, ನಿರೀಕ್ಷೆ, ಮಾಡ್ಬೇಕು ಕೇಳ್ಬೇಕು ನ್ಯಾಯಕ್ಕಾಗಿ ಭಿಕ್ಷೆ'
(ಹರೀಶ್ ಕಾಂಬಳೆ ರ್‍ಯಾಪ್ ಹಾಡಿನ ಝಲಕ್)
ಬೆದರಿಕೆ ಕರೆಗಳು
‘ರಾಜನೀತಿ ಹೊಸ ರ್‍ಯಾಪ್ ಹಾಡಿಗೆ ನೆಟ್ಟಿಗರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಈ ಮಧ್ಯೆ ನನ್ನ ಹಾಡಿನ ‘ಗೋ ಮಾತಾ ಇಲ್ಲಿ ಸೇಫು ಆಗ್ಲಿ ಬಿಡು ರೇಪು' ಎಂಬ ಸಾಲಿಗೆ ಕೆಲವರಿಂದ ಬೆದರಿಕೆ ಕರೆಗಳು ಬರುತ್ತಿದ್ದು, ‘ನೀವು ಯೂಟ್ಯೂಬ್‍ನಲ್ಲಿ ಹಾಕಿರುವ ವಿಡಿಯೋ ಡಿಲೀಟ್ ಮಾಡಿ' ಎಂದು ಆಗ್ರಹಿಸುತ್ತಿದ್ದಾರೆ. ಆದರೆ, ನಾನು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವದಲ್ಲಿ ನಂಬಿಕೆ ಇಟ್ಟಿರುವವನು. ಗೋಹತ್ಯೆ ನಿಷೇಧಕ್ಕೂ ಮೊದಲು ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನು ಜಾರಿ ಏಕೆ ತಂದಿಲ್ಲ ಎಂಬುದು ನನ್ನ ಪ್ರಶ್ನೆ'
-ಹರೀಶ್ ಕಾಂಬಳೆ, ರ್‍ಯಾಪ್ ಗಾಯಕ







