ಪೆಟ್ರೋಲ್, ಡೀಸೆಲ್ ಮೇಲೆ ಕೃಷಿ ಸೆಸ್ ಹೇರಿಕೆ: ಇದರಿಂದ ಇಂಧನ ಬೆಲೆ ಏರಿಕೆ ಆಗಲಿದೆಯೇ ?

ಹೊಸದಿಲ್ಲಿ,ಫೆ.1: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಸಂಸತ್ತಿನಲ್ಲಿ ಮಂಡಿಸಿದ 2021-22ನೇ ಸಾಲಿನ ಮುಂಗಡಪತ್ರದಲ್ಲಿ ಇಂಧನಗಳ ಮೇಲೆ ಕೃಷಿ ಸೆಸ್ ಅಥವಾ ಕೃಷಿ ಮೂಲಸೌಕರ್ಯ ಸೆಸ್ ಹೇರಲಾಗಿದೆ. ಆದರೆ ಕೆಲವರು ಆರಂಭದಲ್ಲಿ ಆತಂಕ ಪಟ್ಟುಕೊಂಡಂತೆ ಈ ಸೆಸ್‌ನ ಹೇರಿಕೆಯಿಂದ ಇಂಧನ ಬೆಲೆಗಳಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಮತ್ತು ಅದು ತುಂಬ ದುಬಾರಿಯೂ ಆಗುವುದಿಲ್ಲ ಎನ್ನುವುದನ್ನು ಮುಂಗಡಪತ್ರದ ಅಧ್ಯಯನವು ತೋರಿಸಿದೆ.
ಪ್ರತಿ ಲೀ. ಪೆಟ್ರೋಲ್ ಮೇಲೆ 2.50 ರೂ. ಮತ್ತು ಡೀಸಿಲ್ ಮೇಲೆ 4 ರೂ.ಕೃಷಿ ಸೆಸ್ ಹೇರಲಾಗಿದೆ.
ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕೃಷಿ ಮೂಲಸೌಕರ್ಯ ಮತ್ತು ಅಭಿವೃದ್ಧಿ ಸೆಸ್ ಅನ್ನು ವಿಧಿಸಿರುವ ಹಿನ್ನೆಲೆಯಲ್ಲಿ ಬಳಕೆದಾರರಿಗೆ ಯಾವುದೇ ಹೆಚ್ಚುವರಿ ಹೊರೆಯಾಗದಂತೆ ಮೂಲ ಅಬಕಾರಿ ಸುಂಕ ಮತ್ತು ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ದರಗಳನ್ನು ತಗ್ಗಿಸಲಾಗಿದೆ. ಪರಿಣಾಮವಾಗಿ ಬ್ರಾಂಡ್‌ರಹಿತ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಮೂಲ ಅಬಕಾರಿ ಸುಂಕವು ಅನುಕ್ರಮವಾಗಿ ಪ್ರತಿ ಲೀ.ಗೆ 1.40 ರೂ. ಮತ್ತು 1.80 ರೂ.ಆಗಲಿದೆ ಹಾಗೂ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವು ಅನುಕ್ರಮವಾಗಿ 11 ರೂ. ಮತ್ತು 8 ರೂ.ಆಗಲಿದೆ ಎಂದು ಸೀತಾರಾಮನ್ ವಿವರಿಸಿದ್ದಾರೆ.
ಕಳೆದೆರಡು ತಿಂಗಳುಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಗಗನಚುಂಬಿಯಾಗಿರುವುದನ್ನು ಇಲ್ಲಿ ಗಮನಿಸಬೇಕು. ಇತ್ತೀಚಿಗೆ ಪೆಟ್ರೋಲ್ ಬೆಲೆ ದಿಲ್ಲಿಯಲ್ಲಿ ಸಾರ್ವಕಾಲಿಕ ಏರಿಕೆಯೊಂದಿಗೆ ಪ್ರತಿ ಲೀ.ಗೆ 86 ರೂ.ಗೆ ತಲುಪಿದ್ದರೆ ಮುಂಬೈನಲ್ಲಿ 93 ರೂ.ಗಳಾಗಿತ್ತು.
ಮುಂಗಡಪತ್ರವು ಕೋವಿಡ್ ಸಾಂಕ್ರಾಮಿಕದಿಂದಾಗಿ ಕಂಗೆಟ್ಟಿರುವ ಶ್ರೀಸಾಮಾನ್ಯರಿಗೆ ನೆಮ್ಮದಿಯನ್ನು ಒದಗಿಸುತ್ತದೆ ಮತ್ತು ಆರೋಗ್ಯ ಹಾಗೂ ಮೂಲಸೌಕರ್ಯ ಕ್ಷೇತ್ರಗಳಲ್ಲಿ, ಗಡಿಗಳಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ರಕ್ಷಣಾ ಕ್ಷೇತ್ರದಲ್ಲಿ ಹೆಚ್ಚಿನ ವೆಚ್ಚಗಳ ಮೂಲಕ ಆರ್ಥಿಕ ಪುನಃಶ್ಚೇತನಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿತ್ತು.







