ತನ್ನ ನಕಲಿ ಸಹಿ ಬಳಸಿ ಬ್ಯಾಂಕ್ ಸಾಲ ಪಡೆಯುತ್ತಿದ್ದ ಪತಿ ವಿರುದ್ಧವೇ ದೂರು ನೀಡಿದ ಪತ್ನಿ

ಬೆಂಗಳೂರು, ಫೆ.1: ತನ್ನ ನಕಲಿ ಸಹಿ ಮಾಡಿ ವಿವಿಧ ಬ್ಯಾಂಕ್‍ಗಳಿಂದ ಸಾಲ ಪಡೆಯುತ್ತಿದ್ದ ಪತಿಯ ವಿರುದ್ಧ ಶಂಕರಪುರ ಪೊಲೀಸ್ ಠಾಣೆಯಲ್ಲಿ ಪತ್ನಿಯೇ ದೂರು ದಾಖಲಿಸಿದ್ದಾರೆ.
ವಿವಿಪುರದ ನಿವಾಸಿ ರಾಜೀವ್ ಬಲ್ಸಾಲಿ ವಿರುದ್ಧ ಪ್ರತಿಷ್ಠಿತ ಖಾಸಗಿ ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದ ಪತ್ನಿ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ರಾಜೀವ್ ಬನ್ಸಾಲಿಯನ್ನು 20 ವರ್ಷಗಳ ಹಿಂದೆ ವಿವಾಹವಾಗಿದ್ದ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಪತಿ ಕೆಲಸಕ್ಕೆ ತೆರಳದೇ ನಿತ್ಯ ಮದ್ಯದ ಅಮಲಿನಲ್ಲಿ ಪತ್ನಿ ಜತೆ ಜಗಳ ಮಾಡುತ್ತಿದ್ದ. 2014ರಲ್ಲಿ ವ್ಯವಹಾರ ನಡೆಸಲು 4 ಲಕ್ಷ ರೂ.ಸಾಲ ಕೊಡಿಸಿದರೆ, ಇಎಂಐ ಕಟ್ಟುವುದಾಗಿ ಪತ್ನಿಯನ್ನು ನಂಬಿಸಿ ವಂಚಿಸಿದ್ದ ಎನ್ನಲಾಗಿದೆ.
ಇದಾದ ಬಳಿಕ 2017ನೇ ಸಾಲಿನಲ್ಲಿ ಸಾಲ ಕೊಡಿಸುವಂತೆ ರಾಜೀವ್ ಪತ್ನಿಯನ್ನು ಪೀಡಿಸಲು ಆರಂಭಿಸಿದ್ದ. ಇದೇ ವಿಚಾರಕ್ಕೆ ದಂಪತಿ ನಡುವೆ ಜಗಳ ನಡೆದು ಇಬ್ಬರೂ ವಿಚ್ಛೇದನ ಪಡೆಯಲು ತೀರ್ಮಾನಿಸಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. 2017ರಲ್ಲಿ ಪತ್ನಿಗೆ ತಿಳಿಯದಂತೆ ಆಕೆಯ ನಕಲಿ ಸಹಿ ಮಾಡಿ ಆಕೆಯ ಹೆಸರಿನಲ್ಲಿದ್ದ ಮನೆಯ ಮೇಲೆ ರಾಜೀವ್ 5 ಲಕ್ಷ ರೂ. ಸಾಲ ಪಡೆದಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಬಳಿಕ ಇಎಂಐ ಪಾವತಿಸದ ಕಾರಣ ಫೈನಾನ್ಸ್ ಕಂಪೆನಿಯವರು ಪತ್ನಿಗೆ ನೋಟಿಸ್ ಕಳುಹಿಸಿದ್ದರು. ಯಾವುದೇ ಸಾಲ ಪಡೆಯದಿದ್ದರೂ ಏಕೆ ನೋಟಿಸ್ ಕಳಿಸಿದ್ದಾರೆ ಎಂದು ಅನುಮಾನಗೊಂಡ ಮಹಿಳೆ ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದಾಗ ಪತಿ ರಾಜೀವ್ ಪತ್ನಿಯ ನಕಲಿ ಸಹಿ ಮಾಡಿ ಸಾಲ ಪಡೆದಿರುವುದು ಬೆಳಕಿಗೆ ಬಂದಿದೆ.







