ಉಡುಪಿ : ಬಜೆಟ್‌ಗೆ ಜನಪ್ರತಿನಿಧಿಗಳ ಪ್ರತಿಕ್ರಿಯೆಗಳು
'ಕರ್ನಾಟಕದ ಕಡೆಗಣನೆ'
ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಅನುದಾನ ನೀಡದ, ರೈತರಿಗೆ ಯಾವುದೇ ಹೊಸ ಯೋಜನೆಗಳಿಲ್ಲದ, ಕರ್ನಾಟಕವನ್ನು ಸಂಪೂರ್ಣವಾಗಿ ಕಡೆಗಣಿಸಿ ಚುನಾವಣೆ ಇರುವ ರಾಜ್ಯಗಳಿಗೆ ಹೆಚ್ಚಿನ ಅನುದಾನ ಒದಗಿಸಿದ, ಪೆಟ್ರೋಲ್, ಡೀಸೆಲ್‌ಗೆ ಕೃಷಿ ಸೆಸ್ ಮೂಲಕ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಹೊರೆ ಹೊರಿಸಿದ ಬಜೆಟ್.
-ಅಶೋಕ್ ಕುಮಾರ್ ಕೊಡವೂರು, ಅಧ್ಯಕ್ಷ ಉಡುಪಿ ಜಿಲ್ಲಾ ಕಾಂಗ್ರೆಸ್
'ಅಚ್ಛೇ ದಿನ್ ಗಗನಕುಸುಮ'
ಪೆಟ್ರೋಲ್, ಡೀಸೆಲ್ ಮೇಲೆ ಕೃಷಿ ಸೆಸ್ ಹೇರಿ ಗ್ರಾಹಕರಿಗೆ ಇನ್ನಷ್ಟು ಹೊರೆಯನ್ನು ಹೇರಿದ ಬಜೆಟ್. ಆರ್ಥಿಕ ಸಂಕಷ್ಟದ ಸಮಯದಲ್ಲಿ ಜನರ ಮೇಲೆ ಇನ್ನಷ್ಟು ಹೊರೆ ಹೊರಿಸಿ ಅಚ್ಛೇ ದಿನಗಳು ಗಗನಕುಸುಮವಾಗುವಂತೆ ಮಾಡಿದ ಬಜೆಟ್.
-ಭಾಸ್ಕರ ರಾವ್ ಕಿದಿಯೂರು, ವಕ್ತಾರರು, ಉಡುಪಿ ಜಿಲ್ಲಾ ಕಾಂಗ್ರೆಸ್
ನಿರಾಶಾದಾಯಕ ಬಜೆಟ್
ಇದೊಂದು ನಿರಾಶಾದಾಯಕ ಬಜೆಟ್. ಆರ್ಥಿಕ ಸಮಸ್ಯೆ ನಿವಾರಣೆ ಯಾಗುವ ಸಾಧ್ಯತೆ ವಿರಳ. ನಿರುದ್ಯೋಗ ಸಮಸ್ಯೆ ಹೆಚ್ಚುವ ಸಾಧ್ಯತೆ ಇದೆ. ದೇಶದಲ್ಲಿ ಎರಡನೇ ಅತೀಹೆಚ್ಚು ತೆರಿಗೆ ಪಾವತಿಸುವ ಕರ್ನಾಟಕಕ್ಕೆ ಯಾವುದೇ ಕೊಡುಗೆ ಇಲ್ಲ.
-ಯೋಗೀಶ್ ವಿ.ಶೆಟ್ಟಿ, ಜಿಲ್ಲಾಧ್ಯಕ್ಷ ಜೆಡಿಎಸ್ ಉಡುಪಿ
ಜನವಿರೋಧಿ ಬಜೆಟ್
ಅಗತ್ಯ ವಸ್ತುಗಳ ಬೆಲೆಯನ್ನು ಇನ್ನಷ್ಟು ಹೆಚ್ಚಿಸುವ, ಸಾರ್ವಜನಿಕ ಉದ್ದಿಮೆಗಳನ್ನು ಖಾಸಗಿಯವರಿಗೆ ಒಪ್ಪಿಸುವ ಜನವಿರೋಧಿ ಬಜೆಟ್. ಮಾತ್ರ ಅಲ್ಲ ಇದು ಅಂಬಾನಿ-ಅದಾನಿಗಳ ಕೈಗೊಂಬೆ ಸರಕಾರದ ಬಜೆಟ್.
-ಬಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ಸಿಪಿಐಎಂ, ಉಡುಪಿ ಜಿಲ್ಲಾ ಸಮಿತಿ
ಜನಪರ, ಆದರೆ ಜನಪ್ರಿಯ ಅಲ್ಲ
ಕೇಂದ್ರದ ಇಂದಿನ ಬಜೆಟ್ ಜನಪರ ಹೊರತು ಜನಪ್ರಿಯ ಬಜೆಟ್ ಅಲ್ಲ. ಇದು ಕೊರೋನೊತ್ತರ ಬಜೆಟ್.ಕೃಷಿ ಸೆಸ್ ಹಾಕಿರುವ ಬಗ್ಗೆ ಜನರಿಗೆ ಮನವರಿಕೆ ಮಾಡಬೇಕಾದ ಅಗತ್ಯವಿದೆ. ಜನಸಾಮಾನ್ಯರ ಬದುಕಿನ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆಯೊಂದಿಗೆ ಜನಸಾಮಾನ್ಯರು ಬಜೆಟ್‌ನ್ನು ತಪ್ಪಾಗಿ ಅರ್ಥೈಸುವ ಸಾಧ್ಯತೆ ಇದೆ. ಒಟ್ಟಾರೆ ಸಂಕಷ್ಟ ಕಾಲದ ಬಜೆಟ್.
ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ರಾಜಕೀಯ ವಿಶ್ಲೇಷಕರು ಉಡುಪಿ.
ಅಭಿವೃದ್ಧಿಗೆ ಪೂರಕ ಬಜೆಟ್
ಪಶುಸಂಗೋಪನೆ ಮತ್ತು ಮೀನುಗಾರಿಕೆ ಅಭಿವೃದ್ಧಿಗೆ 40,000 ಕೋಟಿ ರೂ. ಮೀಸಲಿರಿಸುವ ಮೂಲಕ ಮೀನುಗಾರಿಕಾ ಅಭಿವೃದ್ಧಿಗೆ ಪೂರಕವಾದ ಬಜೆಟ್. ಈ ಬಜೆಟ್ ದೇಶದ ಸರ್ವರಿಗೂ ಆಶಾದಾಯಕವಾಗಿ ಮೂಡಿಬಂದಿದೆ.
-ಯಶ್‌ಪಾಲ್ ಸುವರ್ಣ, ಅಧ್ಯಕ್ಷ ದ.ಕ.,ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಷನ್ ಮಂಗಳೂರು.
ಹಿರಿಯ ನಾಗರಿಕರಿಗೆ ರಿಯಾಯಿತಿ
ನಿವೃತ್ತ ನೌಕರರ ವೇತನಕ್ಕೆ ಆದಾಯ ತೆರಿಗೆ ಅನ್ವಯಿಸಬಾರದೆಂಬ ದೇಶದ ನಿವೃತ್ತ ಬೇಡಿಕೆ ಈಡೇರದಿದ್ದರೂ, 75 ವರ್ಷಕ್ಕಿಂತ ಹೆಚ್ಚಿನ ಪ್ರಾಯದ ಹಿರಿಯರು ಆದಾಯ ತೆರಿಗೆಯ ವಿವರ ಸಲ್ಲಿಸಬೇಕಾಗಿಲ್ಲವೆಂಬ ರಿಯಾಯಿತಿ ನೀಡಿರುವುದು ಸ್ವಾಗತಾರ್ಹ.
-ಶ್ರೀನಿವಾಸ ಶೆಟ್ಟಿ ತೋನ್ಸೆ, ಜಿಲ್ಲಾ ನಿವೃತ್ತರ ಸಂಘದ ಕಾರ್ಯದರ್ಶಿ ಉಡುಪಿ.
ಜನವಿರೋಧಿ ಬಜೆಟ್
ಕೇಂದ್ರದ ಆಳುವ ಬಿಜೆಪಿ ಪಕ್ಷದ ಹಿಡನ್ ಅಜೆಂಡಾವನ್ನು ಪ್ರತಿಬಿಂಬಿಸುವ ಬಜೆಟ್ ಇದು. ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ಹೆಚ್ಚಿಸಿರುವ ಪರಿಣಾಮ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿ ಸಾಮಾನ್ಯ ಜನರ ಜೀವನ ಇನ್ನಷ್ಟು ಕಠಿಣವಾಗಲಿದೆ.
-ಚಂದ್ರಶೇಖರ ಶೆಟ್ಟಿ, ರಾಜ್ಯ ಪ್ರಧಾನ ಕಾರ್ಯದರ್ಶಿ, ಕಾಂಗ್ರೆಸ್ ಐಟಿ ಸೆಲ್.
ಅತ್ಯುತ್ತಮ ಬಜೆಟ್
ಕೊರೋನದಿಂದಾದ ಆರ್ಥಿಕ ಸಂಕಷ್ಟದ ಸಂದಿಗ್ಧ ಸಮಯದಲ್ಲಿ ದೂರದೃಷ್ಟಿಯನ್ನಿಟ್ಟುಕೊಂಡು ದೇಶವನ್ನು ಆತ್ಮನಿರ್ಭರಗೊಳಿಸುವ ಚಿಂತನೆಯೊಂದಿಗೆ ಮೂಲಸೌಕರ್ಯಗಳು ಹಾಗೂ ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಿದ ಅತ್ಯುತ್ತಮ ಬಜೆಟ್.
-ಕುಯಿಲಾಡಿ ಸುರೇಶ್ ನಾಯಕ್, ಜಿಲ್ಲಾಧ್ಯಕ್ಷ ಬಿಜೆಪಿ ಉಡುಪಿ.







