ಕಂದಾಯ ಆಯುಕ್ತರಿಂದ ಶಿವಮೊಗ್ಗ ಸ್ಫೋಟ ಪ್ರಕರಣದ ತನಿಖೆಗೆ ಸರಕಾರ ನಿರ್ಧಾರ: ಕಾಂಗ್ರೆಸ್ ವಿರೋಧ

ಬೆಂಗಳೂರು, ಫೆ.1: ಶಿವಮೊಗ್ಗ ತಾಲೂಕಿನ ಕಲ್ಲಗಂಗೂರು ಗ್ರಾಮದ ವ್ಯಾಪ್ತಿಯಲ್ಲಿ ಜ.21ರಂದು ರಾತ್ರಿ 10.20ರ ಸುಮಾರಿಗೆ ಸ್ಫೋಟ ಸಂಭವಿಸಿ ಸುಮಾರು 6 ಮಂದಿ ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂದಾಯ ಇಲಾಖೆಯ ಆಯುಕ್ತರ ಮೂಲಕ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ನೀಡಿದ ಉತ್ತರವನ್ನು ವಿರೋಧಿಸಿ ಕಾಂಗ್ರೆಸ್ ಪಕ್ಷ ಸಭಾತ್ಯಾಗ ನಡೆಸಿತು.
ಸೋಮವಾರ ವಿಧಾನಸಭೆಯಲ್ಲಿ ನಿಯಮ 69ರಡಿ ಶಿವಮೊಗ್ಗ ಜಿಲ್ಲೆಯ ಹುಣಸೋಡು ಗ್ರಾಮದ ಬಳಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಗಾಗಿ ಸಂಗ್ರಹಿಸಿದ್ದ ಸ್ಫೋಟಕಗಳು ಸ್ಫೋಟಗೊಂಡ ಪರಿಣಾಮ ಉಂಟಾಗಿರುವ ಸಮಸ್ಯೆಗಳ ಕುರಿತು ನಡೆದ ಚರ್ಚೆಗೆ ಗಣಿ ಸಚಿವರ ಪರವಾಗಿ ಬಸವರಾಜ ಬೊಮ್ಮಾಯಿ ಉತ್ತರಿಸಿದರು.
ಕಾನೂನಿನ ಕಣ್ಣು ತಪ್ಪಿಸಿ ಅಕ್ರಮವಾಗಿ ಗಣಿಗಾರಿಕೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಕಲ್ಲಗಂಗೂರು ಗ್ರಾಮದ ಸರ್ವೆ ನಂ.2 ಪಟ್ಟಾ ಜಮೀನಾಗಿದ್ದು, ಎಸ್.ಟಿ.ಕುಲಕರ್ಣಿಯವರು ಈ ಜಮೀನಿನ ಮಾಲಕರಾಗಿದ್ದಾರೆ. ಈ ಜಮೀನನ್ನು ಸುಧಾಕರ್ ಬಿ.ವಿ. ಎಂಬುವವರು ಗುತ್ತಿಗೆ ಆಧಾರದ ಮೇಲೆ ಪಡೆದು ನಿಯಮಾನುಸಾರವಾಗಿ ಎಸ್.ಎಸ್.ಸ್ಟೋನ್ ಕ್ರಷರ್ ಘಟಕವನ್ನು ಸ್ಥಾಪಿಸಿದ್ದಾರೆ ಎಂದು ಬೊಮ್ಮಾಯಿ ಹೇಳಿದರು.
ಈ ಪ್ರದೇಶದಲ್ಲಿ ಕ್ರಷರ್ ಘಟಕದ ಸ್ಥಾಪನೆಗೆ 2019ರ ಮಾ.25ರಿಂದ ಅನ್ವಯವಾಗುವಂತೆ 5 ವರ್ಷಗಳ ಅವಧಿಗೆ ಲೈಸೆನ್ಸ್ ಅನ್ನು ಫಾರಂ-ಸಿ ಮೂಲಕ ನೀಡಲಾಗಿದೆ. ನಂತರ, ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ(ಕ್ರಷರ್ ಗಳ) ನಿಯಂತ್ರಣ(ತಿದ್ದುಪಡಿ) ಅಧ್ಯಾದೇಶ,2020ರನ್ವಯ ಕ್ರಷರ್ ಘಟಕವನ್ನು 2020ರ ಸೆ.22ರಂದು ಮೂಲ ಮಂಜೂರಾದ ದಿನಾಂಕದಿಂದ 20 ವರ್ಷಗಳ ಅವಧಿಗೆ ವಿಸ್ತರಿಸಲಾಗಿದೆ ಎಂದು ಅವರು ತಿಳಿಸಿದರು.
ಈ ಹಿಂದೆ ಎಸ್.ಟಿ.ಕುಲಕರ್ಣಿ ವಿರುದ್ಧ ಕ್ರಮವಾಗಿ 2018ರ ಎ.23, 2019ರ ಮಾ.5 ಹಾಗೂ 2020ರ ಅ.27ರಂದು ಅನಧಿಕೃತ ಕಲ್ಲುಗಾಣಿಗಾರಿಕೆ ಹಾಗೂ ಗಣಿಗಾರಿಕೆ ಮಾಡಲು ಸ್ಫೋಟ ಸಿಡಿಮದ್ದುಗಳನ್ನು ಬಳಸಿ ಬ್ಲಾಸ್ಟಿಂಗ್ ಮಾಡಿ ಕಲ್ಲು ಸಿಡಿಸಿರುವುದರಿಂದ ಹಾಗೂ ಪರಿಸರಕ್ಕೆ ಹಾನಿ ಉಂಟು ಮಾಡಿರುವುದಾಗಿ ಶಿವಮೊಗ್ಗದ 3ನೆ ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿದೆ ಎಂದು ಬೊಮ್ಮಾಯಿ ಹೇಳಿದರು.
ಜ.21ರಂದು ನಡೆದ ಸ್ಫೋಟದ ಅನಾಹುತಕ್ಕೆ ಸಂಬಂಧಿಸಿದಂತೆ ಬಿ.ವಿ.ಸುಧಾಕರ್ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಶಿವಮೊಗ್ಗ ಜಿಲ್ಲಾಧಿಕಾರಿಯು ಉಪ ವಿಭಾಗಾಧಿಕಾರಿ ನೇತೃತ್ವದಲ್ಲಿ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ. ಅಲ್ಲದೆ, ಸ್ಫೋಟಕ ಘಟನೆ ನಡೆದ ಸ್ಥಳದಲ್ಲಿನ ಕ್ರಷರ್ ಘಟಕದ ಲೈಸೆನ್ಸ್ ಅನ್ನು ರದ್ದುಗೊಳಿಸಲಾಗಿದೆ ಎಂದು ಬೊಮ್ಮಾಯಿ ತಿಳಿಸಿದರು.
ಹುಣಸೋಡು ಗ್ರಾಮ ಒಳಗೊಂಡೊಂತೆ ಸುತ್ತಮುತ್ತಲಿನ ಗ್ರಾಮಗಳಾದ ಕಲ್ಲಗಂಗೂರು, ಗೆಜ್ಜೆನಹಳ್ಳಿ, ದೇವಕಾತಿಕೊಪ್ಪ, ಬಸವನಗಂಗೂರು, ಅಬ್ಬಲಗೆರೆ, ಕೋಟೆಗಂಗೂರು ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಅನಧಿಕೃತ ಕಲ್ಲು ಗಣಿಗಾರಿಕೆಗಾಗಿ 2015-16ನೆ ಸಾಲಿನಿಂದ 2020ರ ಡಿಸೆಂಬರ್‍ವರೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಒಟ್ಟು 71 ಪ್ರಕರಣಗಳಲ್ಲಿ 281 ವ್ಯಕ್ತಿಗಳು ಮತ್ತು 116 ವಾಹನಗಳ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಈ ವೇಳೆ ಮಧ್ಯಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಈ ಅಕ್ರಮ ಗಣಿಗಾರಿಕೆಯಲ್ಲಿ ಯಾರೆಲ್ಲ ಪ್ರಭಾವಿಗಳು ಪಾಲ್ಗೊಂಡಿದ್ದಾರೆ ಎಂಬುದನ್ನು ಪತ್ತೆಹಚ್ಚಿ ಶಿಕ್ಷೆ ನೀಡಬೇಕು ಎಂಬ ಪ್ರಾಮಾಣಿಕತೆ ಸರಕಾರಕ್ಕೆ ಇದ್ದರೆ, ಕಂದಾಯ ಆಯುಕ್ತರ ಬದಲಾಗಿ ಹೈಕೋರ್ಟ್‍ನ ಹಾಲಿ ನ್ಯಾಯಾಧೀಶರ ಮೂಲಕ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಆದರೆ, ಇದಕ್ಕೆ ಪ್ರತಿಕ್ರಿಯಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಅಕ್ರಮ ಕಲ್ಲು ಗಣಿಗಾರಿಕೆಗೆ ಕಡಿವಾಣ ಹಾಕಲು ಸರಕಾರ ಬದ್ಧವಾಗಿದೆ. ಈ ಪ್ರಕರಣವನ್ನು ತಾರ್ಕಿಕ ಅಂತ್ಯ ಕಾಣಿಸುತ್ತೇವೆ. ಕಾನೂನಿನ ಚೌಕಟ್ಟಿನಲ್ಲಿ ನಡೆಯುತ್ತಿರುವ ಗಣಿಗಾರಿಕೆಗೆ ನಮ್ಮ ಅಭ್ಯಂತರವಿಲ್ಲ. ಆದರೆ, ಅಕ್ರಮವಾಗಿ ಗಣಿಗಾರಿಕೆ ಮಾಡುವವರನ್ನು ರಕ್ಷಿಸುವ ಪ್ರಶ್ನೆಯೆ ಇಲ್ಲ ಎಂದರು. ಆದರೆ ಸರಕಾರದ ಉತ್ತರವನ್ನು ಪ್ರತಿಭಟಿಸಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು.
‘ಶಿವಮೊಗ್ಗ ಜಿಲ್ಲೆಯ ಹುಣಸೋಡುನಲ್ಲಿ ನಡೆದ ಘಟನೆಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿದ್ದು ಐಪಿಸಿ ಸೆಕ್ಷನ್ 304ರ ಅನ್ವಯ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆಯಲ್ಲಿ ಸಿಗುವ ಆಧಾರಗಳ ಮೇಲೆ ಸೆಕ್ಷನ್ 302ಕ್ಕೂ ಪರಿವರ್ತಿಸಲು ಸರಕಾರ ಸಿದ್ಧವಿದೆ. ಸ್ಪೋಟದ ಕುರಿತು ವಿವಿಧ ಆಯಾಮಗಳನ್ನು ತನಿಖೆ ಮಾಡಲಾಗುತ್ತಿದ್ದು ಈ ಕುರಿತಂತೆ ಈಗಾಗಲೇ ಹಲವರನ್ನು ಬಂಧಿಸಲಾಗಿದೆ ಮತ್ತೆ ಕೆಲವರು ಹೊರರಾಜ್ಯಗಳಲ್ಲಿದ್ದು ಅವರನ್ನು ಪತ್ತೆ ಹಚ್ಚಲು ಕ್ರಮವಹಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ತನಿಖೆ ನಡೆಯುತ್ತಿದ್ದು ಅಕ್ರಮ ಗಣಿಗಾರಿಕೆ ತಡೆಯಲಾಗುವುದು'
-ಬಸವರಾಜ ಬೊಮ್ಮಾಯಿ, ಗೃಹ ಸಚಿವ







