ಉಡುಪಿ ನಗರಸಭೆ ಬಿಜೆಪಿ ಸದಸ್ಯ ಕೊಡಂಚರಿಂದ ಮೀನುಗಾರರ ಬಗ್ಗೆ ಅವಹೇಳನಕಾರಿ ಹೇಳಿಕೆ ಆರೋಪ : ಖಂಡನೆ
ಉಡುಪಿ, ಫೆ.1: ಉಡುಪಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಗರಸಭಾ ಸದಸ್ಯ ಕೃಷ್ಣರಾವ್ ಕೊಡಂಚ ಮಲ್ಪೆಯಲ್ಲಿ ಮರಿನಾ ನಿರ್ಮಿಸಲು ಉದ್ದೇಶಿಸಿರುವ ಯೋಜನೆಯನ್ನು ಸಮರ್ಥಿಸುವ ಭರದಲ್ಲಿ ಮೀನುಗಾರರು ಹಾಗೂ ಮೀನುಗಾರಿಕೆ ವೃತ್ತಿಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ ಉಡುಪಿ ಜಿಲ್ಲಾ ಹಸಿಮೀನು ಮಾರಾಟಗಾರರ ಸಂಘ ತೀವ್ರವಾಗಿ ಖಂಡಿಸಿದೆ.
ಈಗಾಗಲೇ ಮರಿನಾ ಯೋಜನೆಯ ಬಗ್ಗೆ ಮೀನುಗಾರರನ್ನು ವಿಶ್ವಾಸಕ್ಕೆ ಪಡೆಯದೆ ಯೋಜನೆ ಜಾರಿಗೆ ಮುಂದಾಗುವ ಮೂಲಕ ಮೀನುಗಾರ ರಲ್ಲಿ ಭವಿಷ್ಯದ ಮೀನುಗಾರಿಕೆಯ ಬಗ್ಗೆ ಆತಂಕ ಮನೆಮಾಡಿದ್ದು, ಗಾಯಕ್ಕೆ ಬರೆ ಎಳೆಯುವಂತೆ ಕೃಷ್ಣರಾವ್ ಕೊಡಂಚರವರ ಹೇಳಿಕೆ ಮೀನುಗಾರರಲ್ಲಿ ಆಕ್ರೋಶ ಮೂಡಿಸಿದೆ.
ಕರಾವಳಿ ಭಾಗದಲ್ಲಿ ಮೀನುಗಾರಿಕೆಯ ಮೂಲಕ ಸ್ವಾವಲಂಬನೆಯ ಜೀವನ ನಡೆಸುತ್ತಿರುವ ಮೀನುಗಾರರನ್ನು ಈ ಸಂದರ್ಭದಲ್ಲಿ ಅವಹೇಳನ ಮಾಡಿರುವ ನಗರಸಭಾ ಸದಸ್ಯರು ಕೂಡಲೇ ಬಹಿರಂಗವಾಗಿ ಕ್ಷಮೆ ಯಾಚಿಸಬೇಕು ಎಂದು ಸಂಘ ಒತ್ತಾಯಿಸಿದೆ.
ಕರಾವಳಿ ಜಿಲ್ಲೆಯ ಆರ್ಥಿಕತೆಗೆ ಬಹುದೊಡ್ಡ ಕೊಡುಗೆ ನೀಡುತ್ತಿರುವ ಮೀನುಗಾರಿಕೆಯ ಬಗ್ಗೆ ಉಡುಪಿ ಚೇಂಬರ್ ಆ್ ಕಾಮರ್ಸ್ ಸಂಸ್ಥೆಯ ಅಧ್ಯಕ್ಷರಾಗಿ ಜವಾಬ್ದಾರಿ ಸ್ಥಾನದಲ್ಲಿರುವವರೇ ಶಾಸಕರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಈ ಬೇಜವಾಬ್ದಾರಿ ಹೇಳಿಕೆ ನೀಡುವ ಮೂಲಕ ಮೀನುಗಾರರ ನೈತಿಕ ಸ್ಥೈರ್ಯ ಕುಗ್ಗಿಸಿದ್ದಾರೆ ಎಂದು ಸಂಘ ತಿಳಿಸಿದೆ.
ಮೀನುಗಾರಿಕೆಯ ಬಗ್ಗೆ ಕನಿಷ್ಠ ಮಾಹಿತಿಯೂ ಇಲ್ಲದ ಈ ಸದಸ್ಯರು ಕೂಡಲೇ ಈ ಬಗ್ಗೆ ಕ್ಷಮೆಯಾಚಿಸಬೇಕು. ತಪ್ಪಿದಲ್ಲಿ ಇವರ ವಿರುದ್ಧ ನಗರ ಸಭೆಯ ಮುಂಭಾಗದಲ್ಲಿ ಸಮಸ್ತ ಮೀನುಗಾರರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.







