ಕೃಷಿ ಕಾಯ್ದೆಗಳನ್ನು ವಿರೋಧಿಸಿ ಬಜೆಟ್ ಅಧಿವೇಶನದ ಸಂದರ್ಭ ಕಪ್ಪು ನಿಲುವಂಗಿ ಧರಿಸಿದ ಕಾಂಗ್ರೆಸ್ ಸಂಸದರು

ಹೊಸದಿಲ್ಲಿ, ಫೆ. 1: ಲೋಕಸಭೆಯಲ್ಲಿ ಸೋಮವಾರ 2021ರ ಕೇಂದ್ರ ಬಜೆಟ್ ಮಂಡನೆ ಸಂದರ್ಭ ಪಂಜಾಬ್‌ನ ಕಾಂಗ್ರೆಸ್ ಸಂಸದರಾದ ಗುರ್ಜೀತ್ ಸಿಂಗ್ ಔಜ್ಲಾ, ಜಸ್ಬೀರ್ ಸಿಂಗ್ ಗಿಲ್ ಹಾಗೂ ರವ್‌ಣೀತ್ ಸಿಂಗ್ ಬಿಟ್ಟು ಕಪ್ಪು ನಿಲುವಂಗಿ ಧರಿಸಿ ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ಪಂಜಾಬ್‌ನ ಮೂವರು ಸಂಸದರು ದಿಲ್ಲಿಯ ಜಂತರ್‌ನಲ್ಲಿ ಕಳೆದ ಎರಡು ತಿಂಗಳಿಂದ ಧರಣಿ ನಡೆಸುತ್ತಿದ್ದಾರೆ. ಮೂವರು ಸಂಸದರು ಸೋಮವಾರ ಸಂಸತ್ ಸದನದ ಸಂಕೀರ್ಣದಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆಯ ಎದುರು ಕುಳಿತು ಧರಣಿ ನಡೆಸಿದರು ಹಾಗೂ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ವ್ಯಕ್ತಪಡಿಸಿ ಹಾಗೂ ರೈತರು ಆಗ್ರಹಿಸಿದರೂ ಕೃಷಿ ಕಾಯ್ದೆಗಳನ್ನು ಹಿಂಪಡೆಯದ ಕೇಂದ್ರ ಸರಕಾರದ ರೈತ ವಿರೋಧಿ ವರ್ತನೆಯನ್ನು ಖಂಡಿಸಿ ನಾವು ಬಜೆಟ್ ಮಂಡನೆಯ ಸಂದರ್ಭ ಕಪ್ಪು ಬಟ್ಟೆ ಧರಿಸಿದೆವು ಎಂದು ಗಿಲ್ ಹೇಳಿದ್ದಾರೆ.