ಶೃಂಗೇರಿಯಲ್ಲಿ ಬಾಲಕಿಯ ಅತ್ಯಾಚಾರ ಪ್ರಕರಣ: ಸೂಕ್ತ ತನಿಖೆಗೆ ಕ್ಯಾಂಪಸ್ ಫ್ರಂಟ್ ಆಗ್ರಹ
ಚಿಕ್ಕಮಗಳೂರು, ಫೆ.1: ಶೃಂಗೇರಿಯಲ್ಲಿ ಅಪ್ರಾಪ್ತ ಬಾಲಕಿಯ ಲೈಂಗಿಕ ದೌರ್ಜನ್ಯ ಪ್ರಕರಣವು ನಾಗರಿಕ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದೆ. ಈ ಘಟನೆಯನ್ನು ಕ್ಯಾಂಪಸ್ ಫ್ರಂಟ್ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ ಎಂದು ಜಿಲ್ಲಾಧ್ಯಕ್ಷ ಸವೂದ್ ಆಲಮ್ ಪ್ರತಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ 17 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಅದರಲ್ಲಿ ಕೇವಲ 8 ಮಂದಿಯ ಬಂಧನ ಮಾತ್ರವಾಗಿದೆ. ಉಳಿದ ಆರೋಪಿಗಳ ಪತ್ತೆಗೆ ಪೊಲಿಸರು ಏಕೆ ಮೀನಾಮೇಷ ಎಣಿಸುತ್ತಿದ್ದಾರೆ ಎಂದು ಪ್ರಶ್ನಿಸಿರುವ ಅವರು, ಇದು ಉತ್ತರ ಪ್ರದೇಶದ ಮಾದರಿಯಲ್ಲಿ ನಡೆದ ಘಟನೆ ಎಂಬುದು ಕ್ಯಾಂಪಸ್ ಫ್ರಂಟ್ ಅಭಿಪ್ರಾಯವಾಗಿದೆ. ಘಟನೆಯ ಪ್ರಮುಖ ಆರೋಪಿಗಳೆಲ್ಲರೂ ಸಂಘಪರಿವಾರದಲ್ಲಿ ಗುರುತಿಸಿದ್ದು, ಅವರ ಸಂಸ್ಕೃತಿಯನ್ನು ಅನಾವರಣಗೊಳಿಸಿದ್ದಾರೆ. ಮಾತೆತ್ತಿದರೆ ಹಿಂದು ಹೆಣ್ಣುಮಕ್ಕಳ ರಕ್ಷಣೆಯ ಬಗ್ಗೆ ಮಾತನಾಡುವ ಸಂಘಪರಿವಾದ ನಾಯಕರು ಮತ್ತು ಚಿಕ್ಕಮಗಳೂರಿನ ಸಂಸದೆ ಶೋಭಾ, ಶಾಸಕ ಸಿಟಿ ರವಿ ಅವರು ಈ ಪ್ರಕರಣದ ವಿರುದ್ಧ ಕಿಂಚಿತ್ತೂ ಪ್ರತಿಕ್ರಿಯಿಸದೇ ಇರುವುದು ವಿಪರ್ಯಾಸ ಎಂದು ವಿಷಾದಿಸಿದ್ದಾರೆ.
ಪ್ರಕರಣದ ಗಾಂಭೀರ್ಯತೆಯನ್ನು ಅರಿತು ಇನ್ನುಳಿದ ಪ್ರಮುಖ ಆರೋಪಿಗಳನ್ನು ಪತ್ತೆ ಹಚ್ಚಿ ಕಾನೂನಿನ ಮುಂದೆ ಒಪ್ಪಿಸಬೇಕು. ಅಲ್ಲದೇ ಸಂತ್ರಸ್ತೆಯ ಕುಟುಂಬಕ್ಕೆ ಸೂಕ್ತ ಪರಿಹಾರ ಮತ್ತು ಭದ್ರತೆಯನ್ನು ಒದಗಿಸಬೇಕೆಂದು ಕ್ಯಾಂಪಸ್ ಫ್ರಂಟ್ ಪೊಲೀಸ್ ಇಲಾಖೆಯನ್ನು ಒತ್ತಾಯಿಸುತ್ತದೆ ಎಂದು ಜಿಲ್ಲಾಧ್ಯಕ್ಷ ಸವೂದ್ ಆಲಮ್ ತಿಳಿಸಿದ್ದಾರೆ.





