ಪ್ರಜಾಪ್ರಭುತ್ವ ಸರ್ವಾಧಿಕಾರದತ್ತ ಹೊರಳುತ್ತಿದೆಯೇ?: ಬಜರಂಗ್ ಪುನಿಯಾ
ಪತ್ರಕರ್ತ ಮನ್ ದೀಪ್ ಬಂಧನ ವಿರುದ್ಧ ಧ್ವನಿ ಎತ್ತಿದ ಭಾರತದ ಖ್ಯಾತ ಕುಸ್ತಿಪಟು

ಮನ್ ದೀಪ್ / ಬಜರಂಗ್ ಪುನಿಯಾ
ಹೊಸದಿಲ್ಲಿ: ವಿಶ್ವ ಶ್ರೇಷ್ಠ ಕುಸ್ತಿಪಟುಗಳ ಪೈಕಿ ಒಬ್ಬರಾಗಿರುವ, ಟೋಕಿಯೊ ಒಲಿಂಪಿಕ್ಸ್ ನಲ್ಲಿ ಭಾರತಕ್ಕೆ ಪದಕದ ಭರವಸೆ ಮೂಡಿಸಿರುವ ಬಜರಂಗ್ ಪುನಿಯಾ ಅವರು ಪತ್ರಕರ್ತ ಮನ್ ದೀಪ್ ಪುನಿಯಾ ಬಂಧನದ ವಿರುದ್ಧ ಧ್ವನಿ ಎತ್ತಿದ್ದಾರೆ.
“ಅರ್ನಬ್ ಗೋಸ್ವಾಮಿಗಾಗಿ ತುರ್ತು ವಿಚಾರಣೆ ನಡೆಸಿದ ಅದೇ ಸುಪ್ರೀಂಕೋರ್ಟ್ ಈಗ ಮನ್ ದೀಪ್ ಪುನಿಯಾ ಬಂಧನದ ಬಗ್ಗೆ ಮೌನವಾಗಿದೆ. ಅದರ ಬಗ್ಗೆ ಯೋಚಿಸಿ. ಇದು ಪ್ರಜಾಪ್ರಭುತ್ವದಲ್ಲಿ ಸರಿಯಲ್ಲ. ಪತ್ರಕರ್ತರ ಧ್ವನಿಯನ್ನು ಈ ರೀತಿ ಮೌನಗೊಳಿಸಬಾರದು. ಪ್ರಜಾಪ್ರಭುತ್ವ ಸರ್ವಾಧಿಕಾರದತ್ತ ಹೊರಳುತ್ತಿದೆ ಯಾಕೆ? ರೈತರ ಧ್ವನಿಯನ್ನು ಆಲಿಸಿ, ಅದನ್ನು ನಿಗ್ರಹಿಸಬೇಡಿ ಎಂದು ಬಜರಂಗ್ ಟ್ವೀಟ್ ಮಾಡಿದ್ದಾರೆ.
ಕರ್ತವ್ಯದಲ್ಲಿದ್ದ ಸ್ಟೇಷನ್ ಹೌಸ್ ಆಫೀಸರ್ (ಎಸ್ ಎಚ್ ಒ) ಅವರೊಂದಿಗೆ ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿ ಜನವರಿ 30, ಶನಿವಾರದಂದು ದಿಲ್ಲಿ ಪೊಲೀಸರು ಪುನಿಯಾ ಅವರನ್ನು ಸಿಂಘು ಗಡಿಯಲ್ಲಿ ಬಂಧಿಸಿದ್ದರು ಎಂದು ‘ದಿ ಇಂಡಿಯನ್ ಎಕ್ಸ್ ಪ್ರೆಸ್’ ವರದಿ ಮಾಡಿತ್ತು.
‘ದಿ ಕಾರವಾನ್’ ಮ್ಯಾಗಝಿನ್ ಗಾಗಿ ವರದಿ ಮಾಡುತ್ತಿದ್ದ ಫ್ರೀಲ್ಯಾನ್ಸ್ ಪತ್ರಕರ್ತ ಪುನಿಯಾ ಅವರು ಸಿಂಘುವಿನಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ವರದಿ ಮಾಡಲು ತೆರಳಿದ್ದರು. ತಡೆ ಬೇಲಿ ದಾಟಿ ವರದಿ ಮಾಡಲು ಮುಂದಾಗಿದ್ದ ಮನ್ ದೀಪ್ ಹಾಗೂ ಇನ್ನೋರ್ವ ಪತ್ರಕರ್ತ ಧರ್ಮೇಂದ್ರ ಸಿಂಗ್ ಅವರನ್ನು ಪೊಲೀಸರು ತಡೆದಿದ್ದರು. ದಿಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಪುನಿಯಾರನ್ನು ದಿಲ್ಲಿ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಕಸ್ಟಡಿಗೆ ಕಳುಹಿಸಿದೆ ಎಂದು thequint.com ವರದಿ ಮಾಡಿದೆ.
अर्नब के लिए इमरजेंसी सुनवाई करने वाला सुप्रीम कोर्ट मनदीप पूनिया पर मौन क्यों है?यह लोकतंत्र के अंदर ठीक नहीं है,इस बारे में कुछ सोचना चाहिए पत्रकारों की आवाज ऐसे नहीं दबानी चाहिए लोकतंत्र को तानाशाही में क्यू बदला जा रहा हैं।आम किसान मजदूर की बात सुनों उसे दबाने का काम न करें। pic.twitter.com/8PTvPXybfC
— Bajrang Punia (@BajrangPunia) January 31, 2021







