ಆರು ಆಧಾರಸ್ತಂಭಗಳ ಬಜೆಟ್: ನಿರ್ಮಲಾ ಸೀತಾರಾಮನ್

ಹೊಸದಿಲ್ಲಿ, ಫೆ.1: ಈ ವರ್ಷದ ಬಜೆಟ್‌ಗೆ ಆರು ಆಧಾರಸ್ತಂಭಗಳಿವೆ ಆರೋಗ್ಯ ಮತ್ತು ಯೋಗಕ್ಷೇಮ, ದೈಹಿಕ ಆರ್ಥಿಕ ಬಂಡವಾಳ ಮತ್ತು ಮೂಲಸೌಕರ್ಯ, ಮಹತ್ವಾಕಾಂಕ್ಷೆಯ ಭಾರತಕ್ಕಾಗಿ ಅಂತರ್ಗತ ಅಭಿವೃದ್ಧಿ, ಮಾನವ ಸಂಪನ್ಮೂಲದ ಪುನರುಜ್ಜೀವನ, ನಾವೀನ್ಯತೆ, ಸಂಶೋಧನೆ ಮತ್ತು ಅಭಿವೃದ್ಧಿ, ಕನಿಷ್ಠ ಸರಕಾರ ಮತ್ತು ಗರಿಷ್ಠ ಆಡಳಿತ ಕಾರ್ಯನೀತಿ - ಇವೇ ಆರು ಆಧಾರ ಸ್ತಂಭಗಳು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಕೇಂದ್ರ ಮುಂಗಡಪತ್ರವನ್ನು ಸೋಮವಾರ ಸಂಸತ್ತಿನಲ್ಲಿ ಮಂಡಿಸಿ ಮಾತನಾಡಿದ ಅವರು, ಆರೋಗ್ಯರಕ್ಷಣೆ ಕ್ಷೇತ್ರದಲ್ಲಿ ಮೂಲಸೌಕರ್ಯ ಗಣನೀಯವಾಗಿ ಅಭಿವೃದ್ಧಿಯಾಗಿದ್ದು ರೋಗ ತಡೆಗಟ್ಟುವುದು, ರೋಗ ನಿವಾರಿಸುವುದು ಮತ್ತು ಯೋಗಕ್ಷೇಮ- ಈ ಮೂರು ಕ್ಷೇತ್ರಗಳನ್ನು ಸದೃಢಗೊಳಿಸಲಾಗುವುದು ಎಂದು ಹೇಳಿದರು.
ಪ್ರಧಾನಮಂತ್ರಿ ಆತ್ಮನಿರ್ಭರ ಸ್ವಸ್ಥ ಭಾರತ್ ಯೋಜನೆ ಎಂಬ ಹೊಸ ಆರೋಗ್ಯ ಕಾರ್ಯಕ್ರಮವನ್ನು ಘೋಷಿಸಿದ ಅವರು, ಇದಕ್ಕೆ ಮುಂದಿನ 6 ವರ್ಷಗಳಲ್ಲಿ 64,180 ಕೋಟಿ ರೂ. ವಿನಿಯೋಗಿಸಲಾಗುವುದು. ದೇಶದ ಆರೋಗ್ಯಕ್ಷೇತ್ರದ ಮೂಲಸೌಕರ್ಯ ಹೆಚ್ಚಿಸುವ ಪ್ರಧಾನ ಉದ್ದೇಶದ ಈ ಯೋಜನೆಯಲ್ಲಿ ಹೊಸ ರೋಗ, ಸೋಂಕಿನ ಪತ್ತೆ ಹಾಗೂ ಚಿಕಿತ್ಸೆಗೆ ಹೊಸ ಸಂಸ್ಥೆಯ ಸ್ಥಾಪನೆ, ಆರೋಗ್ಯ ಕ್ಷೇಮ ಕೇಂದ್ರಗಳ ಸ್ಥಾಪನೆ, ದೇಶದ ಎಲ್ಲಾ ಜಿಲ್ಲೆಗಳಲ್ಲಿ ಸಮಗ್ರ ಆರೋಗ್ಯ ಪ್ರಯೋಗಾಲಯ ಸ್ಥಾಪನೆ , ತಳಮಟ್ಟದಲ್ಲಿ ಅತ್ಯಾಧುನಿಕ ಆಸ್ಪತ್ರೆಗಳ ಸ್ಥಾಪನೆ ಒಳಗೊಂಡಿದೆ. ಈ ವರ್ಷ ಕೊರೋನ ಲಸಿಕೆ ಅಭಿವೃದ್ಧಿಗೆ 35,000 ಕೋಟಿ ರೂ. ವೆಚ್ಚ ಮಾಡಲಾಗುವುದು ಎಂದು ಹೇಳಿದ್ದಾರೆ.







