ಪ್ರಮುಖ ಬಂದರುಗಳ ನಿರ್ವಹಣೆ ಖಾಸಗಿಯವರಿಗೆ: ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಘೋಷಣೆ

ಹೊಸದಿಲ್ಲಿ, ಫೆ. 1: ದೇಶದ ಪ್ರಮುಖ ಬಂದರುಗಳ ನಿರ್ವಹಣೆಯನ್ನು ಇನ್ನು ಮುಂದೆ ಅವುಗಳ ಪರವಾಗಿ ಖಾಸಗಿ ಭಾಗೀದಾರರೊಬ್ಬರು ನಿಭಾಯಿಸಲಿದ್ದಾರೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಘೋಷಿಸಿದ್ದಾರೆ.
ಇದರ ಭಾಗವಾಗಿ, 2021-22ರಲ್ಲಿ ದೇಶದ ಪ್ರಮುಖ ಬಂದರುಗಳು ಸರಕಾರ-ಖಾಸಗಿ ಭಾಗೀದಾರಿಕೆ ಮಾದರಿಯಲ್ಲಿ 2,000 ಕೋಟಿ ರೂಪಾಯಿ ಮೌಲ್ಯದ ಏಳು ಯೋಜನೆಗಳನ್ನು ಒದಗಿಸಲಿವೆ.
ಭಾರತದಲ್ಲಿ ವಾಣಿಜ್ಯ ಹಡಗುಗಳ ಉದ್ಯಮಕ್ಕೆ ಪ್ರೋತ್ಸಾಹ ನೀಡುವುದಕ್ಕಾಗಿ ಸಚಿವಾಲಯಗಳು ಮತ್ತು ಸಿಪಿಎಸ್‌ಇಗಳು ಕರೆಯುವ ಜಾಗತಿಕ ಟೆಂಡರ್‌ಗಳಲ್ಲಿ ಭಾರತೀಯ ಹಡಗು ಕಂಪೆನಿಗಳಿಗೆ 1,624 ಕೋಟಿ ರೂಪಾಯಿ ಸಬ್ಸಿಡಿಯನ್ನು ನೀಡುವ ಪ್ರಸ್ತಾಪವನ್ನೂ ಸಚಿವೆ ಮುಂದಿಟ್ಟಿದ್ದಾರೆ.
ಈ ಉಪಕ್ರಮವು ಭಾರತೀಯ ನಾವಿಕರಿಗೆ ಉತ್ತಮ ತರಬೇತಿ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸುವುದು ಹಾಗೂ ಜಾಗತಿಕ ಹಡಗುಯಾನದಲ್ಲಿ ಭಾರತೀಯ ಕಂಪೆನಿಗಳ ಪಾಲನ್ನು ಹೆಚ್ಚಿಸುವುದು ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.
ಭಾರತದಲ್ಲಿ 12 ಪ್ರಮುಖ ಬಂದರುಗಳಿವೆ. ಅವುಗಳೆಂದರೆ: ದೀನದಯಾಳ್ (ಹಿಂದಿನ ಹೆಸರು ಕಾಂಡ್ಲಾ) ಬಂದರು, ಮುಂಬೈ ಬಂದರು, ಜೆಎನ್‌ಪಿಟಿ ಬಂದರು, ಮರ್ಮಗೋವ ಬಂದರು, ನವಮಂಗಳೂರು ಬಂದರು, ಕೊಚ್ಚಿನ್ ಬಂದರು, ಚೆನ್ನೈ ಬಂದರು, ಕಾಮರಾಜರ್ (ಹಿಂದಿನ ಹೆಸರು ಎಣ್ಣೂರ್) ಬಂದರು, ವಿ.ಒ. ಚಿದಂದರನಾರ್ ಬಂದರು, ವಿಶಾಖಪಟ್ಟಣ ಬಂದರು, ಪಾರಾದೀಪ್ ಬಂದರು ಮತ್ತು ಕೋಲ್ಕತ ಬಂದರು.
ಕೇಂದ್ರ ಸರಕಾರದ ನಿಯಂತ್ರಣದಲ್ಲಿರುವ ಈ ಬಂದರುಗಳು ದೇಶದ ಒಟ್ಟು ಸರಕು ಸಾಗಣೆಯ ಸುಮಾರು 60 ಶೇಕಡದಷ್ಟನ್ನು ನಿಭಾಯಿಸುತ್ತವೆ.







