ರೈತರೊಂದಿಗೆ ಮಾತುಕತೆಗೆ ಕೇಂದ್ರ ಸರಕಾರ ಸಿದ್ಧವಿದೆ: ನಿರ್ಮಲಾ ಸೀತಾರಾಮನ್
ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ

ಹೊಸದಿಲ್ಲಿ, ಫೆ. 1: ಮೂರು ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಮಾತುಕತೆ ನಡೆಸಲು ಕೇಂದ್ರ ಸರಕಾರ ಸಿದ್ಧವಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಹೇಳಿದ್ದಾರೆ.
2021ರ ಕೇಂದ್ರ ಬಜೆಟ್ ಭಾಷಣದ ಸಂದರ್ಭ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ ನಿರ್ಮಲಾ ಸೀತಾರಾಮನ್, ಗಡಿಯಲ್ಲಿ ರೈತರು ಯಾಕೆ ಧರಣಿ ನಡೆಸುತ್ತಿದ್ದಾರೆ ಎಂಬುದು ನಮಗೆ ಅರ್ಥವಾಗುತ್ತಿದೆ ಎಂದರು.
‘‘ರೈತರಿಗೆ ಯಾವುದೇ ರೀತಿಯ ಪ್ರಶ್ನೆ ಇದ್ದರೆ, ಕೃಷಿ ಸಚಿವ (ನರೇಂದ್ರ ಸಿಂಗ್ ತೋಮರ್)ರು ಮಾತನಾಡುವ ಅವಕಾಶವನ್ನು ನಿರಾಕರಿಸಲಾರರು’’ ಎಂದು ಅವರು ಹೇಳಿದರು.
ತೋಮರ್ ಅವರು ರೈತರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ ಹಾಗೂ ಎಲ್ಲಾ ಮೂರು ಕಾಯ್ದೆಗಳ ಪ್ರತಿ ಉಪವಾಕ್ಯದ ಕುರಿತ ಸಲಹೆಯೊಂದಿಗೆ ಬನ್ನಿ ಎಂದು ರೈತರಿಗೆ ತಿಳಿಸಿದ್ದಾರೆ ಎಂದು ಅವರು ಹೇಳಿದರು.
ಚರ್ಚೆಗೆ ಸರಕಾರ ಮುಕ್ತವಾಗಿದೆ ಎಂದು ಹೇಳಿದ ನಿರ್ಮಲಾ ಸೀತಾರಾಮನ್ ಕೃಷಿ ಕಾಯ್ದೆಗಳನ್ನು ಒಂದೂವರೆ ವರ್ಷಗಳ ಕಾಲ ರದ್ದುಗೊಳಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಕೊಡಗುಗೆ ಈಗಲೂ ಟೇಬಲ್‌ನಲ್ಲಿ ಇದೆ ಎಂದರು.
ಈ ನಡುವೆ ತೋಮರ್, ರೈತರ ಹಿತಾಸಕ್ತಿಗೆ ಅನುಗುಣವಾಗಿ ಕಾರ್ಯ ನಿರ್ವಹಿಸಲು ಕೇಂದ್ರ ಸರಕಾರ ಬದ್ಧವಾಗಿದೆ ಎಂದಿದ್ದಾರೆ. ‘‘ಪ್ರತಿ ವರ್ಷ ಬಜೆಟ್ ಹಂಚಿಕೆಯನ್ನು ಹೆಚ್ಚಿಸುವ ಬಗ್ಗೆ ಮಾತ್ರ ಗಮನ ಕೇಂದ್ರೀಕರಿಸುತ್ತಿಲ್ಲ. ಬದಲಾಗಿ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಕೂಡ ಗಮನ ಹರಿಸಲಾಗುತ್ತಿದೆ’’ ಎಂದು ಅವರು ಹೇಳಿದ್ದಾರೆ. ಪ್ರತಿ ವಿಷಯವನ್ನು ರಾಜಕೀಯಗೊಳಿಸಬೇಡಿ ಎಂದು ಕೃಷಿ ಸಚಿವರು ರಾಜಕೀಯ ಪಕ್ಷಗಳಲ್ಲಿ ಆಗ್ರಹಿಸಿದ್ದಾರೆ.







