ಪಿಎಫ್‌ಗೆ ವಾರ್ಷಿಕ 2.5ಲಕ್ಷಕ್ಕಿಂತ ಹೆಚ್ಚು ವಂತಿಗೆ ನೀಡುವವರಿಗೆ ತೆರಿಗೆ ವಿನಾಯಿತಿ ಇಲ್ಲ

ಹೊಸದಿಲ್ಲಿ, ಫೆ.1: ತೆರಿಗೆ ವಿನಾಯಿತಿಯನ್ನು ತರ್ಕಸಮ್ಮತಗೊಳಿಸುವ ಸಲುವಾಗಿ, ಭವಿಷ್ಯ ನಿಧಿ(ಪ್ರೊವಿಡೆಂಟ್ ಫಂಡ್)ಗೆ ಆರ್ಥಿಕ ವರ್ಷವೊಂದರಲ್ಲಿ 2.5 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನ ವಂತಿಗೆ ನೀಡುವ ವ್ಯಕ್ತಿಗಳಿಗೆ , ಈ ಮೊತ್ತದ ಮೇಲೆ ಮುಂದಿನ ವರ್ಷ ಗಳಿಸುವ ಬಡ್ಡಿಗೆ ತೆರಿಗೆ ವಿನಾಯಿತಿ ಲಭಿಸುವುದಿಲ್ಲ ಎಂದು ಸರಕಾರ ಹೇಳಿದೆ.
2021ರ ಬಜೆಟ್ ಮಂಡಿಸಿದ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಅಧಿಕ ಆದಾಯವಿರುವ ಉದ್ಯೋಗಿಗಳೂ ತೆರಿಗೆ ವಿನಾಯಿತಿ ಪಡೆಯುತ್ತಿರುವುದನ್ನು ಗಮನಿಸಿ, ಭವಿಷ್ಯನಿಧಿಗೆ ವಾರ್ಷಿಕ 2.5 ಲಕ್ಷ ರೂ. ಮಿತಿಯೊಳಗೆ ವಂತಿಗೆ ನೀಡುವ ಉದ್ಯೋಗಿಗಳಿಗೆ ಮಾತ್ರ ಇನ್ನು ಸೌಲಭ್ಯ ಮುಂದುವರಿಸಲು ಸರಕಾರ ನಿರ್ಧರಿಸಿದೆ ಎಂದಿದ್ದಾರೆ.
ಪ್ರಸಕ್ತ, ಉದ್ಯೋಗಿಗಳು ಭವಿಷ್ಯನಿಧಿಗೆ ಪಡೆಯುವ ಬಡ್ಡಿಗೆ ತೆರಿಗೆ ವಿನಾಯತಿ ಇದೆ. ಉದ್ಯೋಗಿಗಳ ಭವಿಷ್ಯ ನಿಧಿ ಕಾರ್ಮಿಕರ ಕ್ಷೇಮಾಭ್ಯುದಯಕ್ಕಿದೆ ಮತ್ತು ಸರಕಾರದ ಈ ಕ್ರಮದಿಂದ ಕಾರ್ಮಿಕರ ಮೇಲೆ ಪರಿಣಾಮವಾಗದು ಎಂದು ಸಚಿವೆ ಹೇಳಿದ್ದಾರೆ. 2019-20ರ ಸಾಲಿನಲ್ಲಿ ಕಾರ್ಮಿಕರ ಭವಿಷ್ಯನಿಧಿಯ ಮೇಲೆ 8.5% ಬಡ್ಡಿ ನಿಗದಿಗೊಳಿಸಲಾಗಿದೆ.





