‘ವಿವಾದ ಸೆ ವಿಶ್ವಾಸ್’ಅಡಿ 95,000 ಕೋ.ರೂ. ಮೊತ್ತದ ವಿವಾದಗಳ ಇತ್ಯರ್ಥ: ಸಿಬಿಡಿಟಿ ಅಧ್ಯಕ್ಷ
ಹೊಸದಿಲ್ಲಿ,ಫೆ.2: ದೀರ್ಘ ಕಾಲದಿಂದ ಬಾಕಿಯುಳಿದಿದ್ದ ಆದಾಯ ತೆರಿಗೆ ಇಲಾಖೆಯೊಂದಿಗಿನ ತಕರಾರುಗಳನ್ನು ಬಗೆಹರಿಸಿಕೊಳ್ಳಲು ‘ವಿವಾದ ಸೆ ವಿಶ್ವಾಸ್ ’ಯೋಜನೆಯನ್ನು ಆಯ್ದುಕೊಂಡಿದ್ದ ಸುಮಾರು 1.20 ಲಕ್ಷ ಸಂಸ್ಥೆಗಳ 95,000 ಕೋ.ರೂ.ಮೊತ್ತದ ವಿವಾದಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದು ಕೇಂದ್ರ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ)ಯ ಮುಖ್ಯಸ್ಥ ಪಿ.ಸಿ.ಮೋದಿ ಅವರು ಮಂಗಳವಾರ ಇಲ್ಲಿ ತಿಳಿಸಿದರು.
ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ 2021-22ನೇ ಸಾಲಿನ ಮುಂಗಡಪತ್ರವು ಆದಾಯ ತೆರಿಗೆದಾರರಿಗೆ ದಕ್ಷ ಮತ್ತು ಪರಿಣಾಮಕಾರಿ ತೆರಿಗೆ ಆಡಳಿತ ದೊರೆಯುವಂತಾಗುವ ಉದ್ದೇಶವನ್ನು ಹೊಂದಿದ್ದು,ಈಗಲೂ ಹರಡುತ್ತಿರುವ ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಯಾವುದೇ ಹೊಸ ತೆರಿಗೆಯನ್ನು ಹೇರಲಾಗಿಲ್ಲ ಎಂದರು.
ತೆರಿಗೆ ವಿವಾದಗಳನ್ನು ತ್ವರಿತವಾಗಿ ಬಗೆಹರಿಸಲು ಸೀತಾರಾಮನ್ ಕಳೆದ ವರ್ಷದ ಮುಂಗಡಪತ್ರದಲ್ಲಿ ಪ್ರಕಟಿಸಿದ್ದ ‘ವಿವಾದ ಸೆ ವಿಶ್ವಾಸ್’ ಯೋಜನೆಯು ಈವರೆಗೆ ಭಾರೀ ಯಶಸ್ಸನ್ನು ಕಂಡಿದೆ. ಜ.31ರವರೆಗೆ ಸುಮಾರು 1.20 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು,ಈ ಯೋಜನೆಯಡಿ ಶೇ.22-ಶೇ.23ರಷ್ಟು ತೆರಿಗೆ ವಿವಾದ ಪ್ರಕರಣಗಳು ಇತ್ಯರ್ಥಗೊಂಡಿವೆ. ಈ ಪ್ರಕರಣಗಳು 95,000 ಕೋ.ರೂ.ಗಳಷ್ಟು ಮೊತ್ತವನ್ನು ಒಳಗೊಂಡಿದ್ದವು ಎಂದು ಮೋದಿ ಸುದ್ದಿಸಂಸ್ಥೆಗೆ ತಿಳಿಸಿದರು.
ವಿವಿಧ ಸಂಸ್ಥೆಗಳ ಕೋರಿಕೆಯ ಮೇರೆಗೆ ಯೋಜನೆಯಡಿ ಘೋಷಣೆಗಳನ್ನು ಸಲ್ಲಿಸಲು ಕೊನೆಯ ದಿನಾಂಕವನ್ನು ಜ.31ರಿಂದ ಫೆ.28ಕ್ಕೆ ವಿಸ್ತರಿಸಲಾಗಿದೆ ಎಂದರು.







