ಅಂತರ್ ಧರ್ಮೀಯ ವಿವಾಹ ತಡೆಗೆ ಕಾನೂನು ಪ್ರಸ್ತಾವ ಇಲ್ಲ : ಕೇಂದ್ರ ಸರ್ಕಾರ ಸ್ಪಷ್ಟನೆ

ಹೊಸದಿಲ್ಲಿ : ದೇಶದಲ್ಲಿ ಅಂತರ್ ಧರ್ಮೀಯ ವಿವಾಹವನ್ನು ತಡೆಯುವ ನಿಟ್ಟಿನಲ್ಲಿ ಮತಾಂತರ ವಿರೋಧಿ ಕಾನೂನು ಜಾರಿಗೆ ತರುವ ಯಾವುದೇ ಪ್ರಸ್ತಾವ ಕೇಂದ್ರದ ಮುಂದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದಂತೆ ಮತಾಂತರ ತಡೆ, ಪತ್ತೆ, ನೋಂದಣಿ, ತನಿಖೆ ಮತ್ತು ಅಭಿಯೋಜನೆ ರಾಜ್ಯ ವಿಷಯಕ್ಕೆ ಸಂಬಂಧಿಸಿದ್ದು ಎಂದು ಸರ್ಕಾರ ಹೇಳಿದೆ.
ಅಂತರ್ ಧರ್ಮೀಯ ವಿವಾಹಕ್ಕೆ ಮತ್ತು ಬಲವಂತದ ಧಾರ್ಮಿಕ ಮತಾಂತರಕ್ಕೆ ಸಂಬಂಧ ಇದೆ ಎಂಬ ಭಾವನೆ ಕೇಂದ್ರ ಸರ್ಕಾರಕ್ಕಿದೆಯೇ ಎಂದು ಲೋಕಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಗೃಹ ಖಾತೆ ರಾಜ್ಯ ಸಚಿವ ಜಿ.ಕಿಷನ್ ರೆಡ್ಡಿ, "ಸಂವಿಧಾನದ 7ನೇ ಶೆಡ್ಯೂಲ್ ಪ್ರಕಾರ ಕಾನೂನು ಸುವ್ಯವಸ್ಥೆ ಮತ್ತು ಪೊಲೀಸ್ ವಿಷಯಗಳು ರಾಜ್ಯ ವಿಷಯಗಳು" ಎಂದು ಸ್ಪಷ್ಟಪಡಿಸಿದರು.
"ಆದ್ದರಿಂದ ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದಂತೆ ಮತಾಂತರ ತಡೆ, ಪತ್ತೆ, ನೋಂದಣಿ, ತನಿಖೆ ಮತ್ತು ಅಭಿಯೋಜನೆ ರಾಜ್ಯ ವಿಷಯಕ್ಕೆ ಸಂಬಂಧಿಸಿದ್ದು. ಆದ್ದರಿಂದ ರಾಜ್ಯ/ ಕೇಂದ್ರಾಡಳಿತ ಪ್ರದೇಶಗಳ ಹೊಣೆ. ಕಾನೂನು ಉಲ್ಲಂಘನೆ ಪ್ರಕರಣಗಳು ಗಮನಕ್ಕೆ ಬಂದಲ್ಲಿ ಕಾನೂನು ಜಾರಿ ಸಂಸ್ಥೆಗಳು ಹಾಲಿ ಇರುವ ಕಾನೂನಿನ ಅನ್ವಯ ಕ್ರಮ ಕೈಗೊಳ್ಳಲಿವೆ" ಎಂದು ವಿವರಿಸಿದರು.
ಕೇಂದ್ರ ಸರ್ಕಾರ ಅಂತರ್ ಧರ್ಮೀಯ ವಿವಾಹವನ್ನು ತಡೆಯಲು ಮತಾಂತರ ವಿರೋಧಿ ಕಾಯ್ದೆ ಜಾರಿಗೆ ತರುವ ಪ್ರಸ್ತಾವ ಇದೆಯೇ ಎಂದು ಕೇಳಿದಾಗ "ಇಲ್ಲ" ಎಂದು ಸ್ಪಷ್ಟ ಉತ್ತರ ನೀಡಿದರು. ಬಿಜೆಪಿ ಆಡಳಿತದ ರಾಜ್ಯಗಳು ಇಂಥ ಕಾನೂನು ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಐವರು ಸಂಸದರು ಈ ಬಗ್ಗೆ ಕೇಂದ್ರದ ಸ್ಪಷ್ಟನೆ ಬಯಸಿದ್ದರು.







