ಸಿಂಘು : ರೈತರಿಗೆ ನೀರು, ಶೌಚಾಲಯಕ್ಕೂ ತಡೆ !

ಹೊಸದಿಲ್ಲಿ: ದೆಹಲಿ- ಚಂಡೀಗಢ ಹೆದ್ದಾರಿಗೆ ನಾಲ್ಕರಿಂದ ಐದು ಅಡಿ ಎತ್ತರದ ಕಾಂಕ್ರೀಟ್ ಗೋಡೆಯನ್ನು ದೆಹಲಿ ಪೊಲೀಸರು ಕಟ್ಟಿರುವ ಕಾರಣದಿಂದ ಪ್ರತಿಭಟನಾ ನಿರತ ಸಂಯುಕ್ತ ಕಿಸಾನ್ ಮೋರ್ಚಾ ಕಾರ್ಯಕರ್ತರು ಅಕ್ಷರಶಃ ರಾಜಧಾನಿ ಜತೆ ಸಂಪರ್ಕ ಕಡಿದುಕೊಂಡಿದ್ದಾರೆ. ಇದರಿಂದ ಪ್ರತಿಭಟನಾ ಸ್ಥಳದಲ್ಲಿ ನೀರು, ಶೌಚಾಲಯದಂಥ ಕನಿಷ್ಠ ಸೌಲಭ್ಯಗಳಿಗೂ ತತ್ವಾರ ಆಗಿದೆ.
ಈ ಗೋಡೆಯ ಹಿಂದೆ ಐದು ಪದರದ ಬ್ಯಾರಿಕೇಡ್‌ಗಳನ್ನು 1.5 ಕಿಲೋಮೀಟರ್ ವಿಸ್ತೀರ್ಣಯದಲ್ಲಿ ಅಳವಡಿಸಲಾಗಿದೆ. ಇದರಿಂದಾಗಿ ದೆಹಲಿ ಜಲಮಂಡಳಿ ಪ್ರತಿಭಟನಾನಿರತ ರೈತರ ನೆರವಿಗಾಗಿ ಕಳುಹಿಸಿಕೊಟ್ಟಿರುವ ನೀರಿನ ಟ್ಯಾಂಕರ್‌ಗಳು ಮತ್ತು ಸಂಚಾರಿ ಶೌಚಾಲಯಗಳು ಕೂಡಾ ರೈತರನ್ನು ತಲುಪುತ್ತಿಲ್ಲ.
ರೈತರಿಗೆ ಇದರಿಂದ ಭಾರೀ ನಿರಾಸೆಯಾಗಿದೆ; ಆದರೆ ರೈತರು ಹತಾಶರಾಗಿಲ್ಲ. "ನಾವು ರೈತರು. ಅಗತ್ಯ ಬಿದ್ದರೆ ನಾವು ಕೊಳವೆಬಾವಿ ಕೊರೆಯುತ್ತೇವೆ. ಈ ಮೂಲಕ ನಮ್ಮ ಮೇಲೆ ಸವಾರಿ ಮಾಡಬಹುದು ಎಂದು ಸರ್ಕಾರ ಯೋಚಿಸಬೇಕಿಲ್ಲ. ನಮ್ಮ ಮಕ್ಕಳಿಗೆ ಸುಭದ್ರ ಭವಿಷ್ಯವನ್ನು ಕಲ್ಪಸದೇ ನಾವು ನಮ್ಮ ಗ್ರಾಮಗಳಿಗೆ ತೆರಳುವುದಿಲ್ಲ" ಎಂದು ಪಾಟಿಯಾಲದ ರೈತ ಕುಲಜೀತ್ ಸಿಂಗ್ ಹೇಳಿದ್ದಾರೆ.
ಪೊಲೀಸರ ಕ್ರಮದಿಂದಾಗಿ ಗಡಿಯ ಇನ್ನೊಂದು ಭಾಗದಲ್ಲಿರುವ ಶೌಚಾಲಯಗಳು ಬಳಕೆಗೆ ಲಭ್ಯವಾಗದೇ ಇರುವ ಕಾರಣದಿಂದ ಕಿಸಾನ್ ಟೌನ್‌ಶಿಪ್‌ನಲ್ಲಿ ಗಂಭೀರ ನೈರ್ಮಲ್ಯ ಸಮಸ್ಯೆ ತಲೆದೋರಿದೆ. ಇದರ ಪರಿಣಾಮವಾಗಿ ಹಲವರು ಬಯಲು ಶೌಚಾಲಯ ಅವಲಂಬಿಸುವುದು ಅನಿವಾರ್ಯವಾಗಿದೆ. ಇದರಿಂದಾಗಿ ರೈತ ಮಹಿಳೆಯರಿಗೆ ಭಾರೀ ತೊಂದರೆ ಉಂಟಾಗಿದೆ. ಹರ್ಯಾಣ ಬದಿಯಲ್ಲಿ ತ್ಯಾಜ್ಯದ ರಾಶಿ ನಿರ್ಮಾಣವಾಗುತ್ತಿದ್ದು, ಸಾಧ್ಯವಾದಷ್ಟು ತ್ಯಾಜ್ಯಗಳನ್ನು ರೈತರು ಖಾಲಿ ನಿವೇಶನಗಳಲ್ಲಿ ಸುಡುತ್ತಿದ್ದಾರೆ.
ಪೊಲೀಸರು ಗೋಡೆ ನಿರ್ಮಾಣ ಮಾಡಿರುವುದು ನಾವು ದೆಹಲಿಯತ್ತ ಮುನ್ನುಗ್ಗದಂತೆ ಅಲ್ಲ; ಬದಲಾಗಿ ದೆಹಲಿಯಿಂದ ನಮಗೆ ಹರಿದು ಬರುತ್ತಿರುವ ನೆರವನ್ನು ತಡೆಯುವ ಸಲುವಾಗಿ ಎಂದು ಬಿಕೆಯು ಕಾರ್ಯಕರ್ತ ಮಂಜೀತ್ ಧಿಲ್ಲಾನ್ ಆಪಾದಿಸಿದ್ದಾರೆ.
ಈ ಮೊದಲು ದೆಹಲಿಯಿಂದ ಸಾಕಷ್ಟು ನೀರಿನ ಟ್ಯಾಂಕರ್‌ಗಳು ಬರುತ್ತಿದ್ದವು. ಆದರೆ ಇದೀಗ ಹರ್ಯಾಣದ ಟ್ಯಾಂಕರ್‌ಗಳನ್ನೇ ಅವಲಂಬಿಸಬೇಕು. ಹಲವರು ನೀರಿನ ಬಾಟಲಿಗಳನ್ನು ಖರೀದಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.







