ಫೆ.5ರಿಂದ ಅವಿಭಜಿತ ಜಿಲ್ಲೆಯ ಪ್ರಪ್ರಥಮ ಕೊರಗ ಕ್ರೀಡೋತ್ಸವ
ಉಡುಪಿ : ಇದೇ ಪ್ರಥಮ ಬಾರಿಗೆ ಉಡುಪಿ ಜಿಲ್ಲಾಡಳಿತ, ಜಿಪಂ ಉಡುಪಿ ಮತ್ತು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ಫೆ.5ರಿಂದ 7ರವರೆಗೆ ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಅಂತರ್ ಜಿಲ್ಲಾಮಟ್ಟದ ಕೊರಗರ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕ ಉತ್ಸವವನ್ನು ಉಡುಪಿ ಜಿಲ್ಲಾ ಕ್ರೀಡಾಂಗಣ ಮತ್ತು ಬೀಡಿನಗುಡ್ಡೆ ಮೈದಾನಗಳಲ್ಲಿ ಆಯೋಜಿಸಲಿದೆ.
ಕ್ರೀಡಾಕೂಟವನ್ನು ಫೆ.6ರ ಸಂಜೆ 6 ಗಂಟೆಗೆ ಅಜ್ಜರಕಾಡಿನಲ್ಲಿರುವ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಲಿದ್ದು, ಉಡುಪಿ ಶಾಸಕ ಕೆ.ರಘುಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ.
ಅವಿಭಜಿತ ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆಯ ಮೂಲನಿವಾಸಿಗಳಾದ ಕೊರಗ ಜನಾಂಗದವರು ಮೂಲತ: ಸಂಕೋಚ ಸ್ವಬಾವದವರು. ತಮ್ಮ ಜನಾಂಗದವರ ಹೊರತು ಇತರರೊಂದಿಗೆ ಹೆಚ್ಚು ಬೆರೆಯುವುದಿಲ್ಲ. ಇವರನ್ನು ಸಮಾಜದ ಮುಖ್ಯವಾಹಿನಿಗೆ ಕರೆತಂದು ಅವರಲ್ಲಿ ಆತ್ಮ ವಿಶ್ವಾಸ ಮೂಡಿಸುವ ಸಲುವಾಗಿ ಈ ಕಾರ್ಯಕ್ರಮವನ್ನು ಮೊದಲ ಬಾರಿಗೆ ಆಯೋಜಿಸಲಾಗುತ್ತಿದೆ.
ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕೊರಗ ಸಮುದಾಯ ದವರಿಗೆ ಮಾತ್ರ ಈ ಕ್ರೀಡೋತ್ಸವ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಗಳು ಮೀಸಲಾಗಿದೆ. ಕ್ರೀಡಾ ಸ್ಪರ್ಧೆಗಳು 14 ವರ್ಷದೊಳಗಿನ ಬಾಲಕ/ಬಾಲಕಿ ಯರು, 16 ವರ್ಷದೊಳಗಿನ ಬಾಲಕ /ಬಾಲಕಿಯರು, 18 ವರ್ಷದೊಳಗಿನ ಯುವಕ /ಯುವತಿಯರು, 20 ವರ್ಷದೊಳಗಿನ ಯುವಕ /ಯುವತಿಯರು, 20 ವರ್ಷ ಮೇಲ್ಪಟ್ಟ ಯುವಕ /ಯುವತಿಯರ ವಿಭಾಗಗಳಲ್ಲಿ ನಡೆಯಲಿವೆ.
ವಿವಿಧ ದೂರದ ಓಟದ ಸ್ಪರ್ಧೆ, ಗುಂಡು ಎಸೆತ, ಉದ್ದ ಜಿಗಿತ, ಹಗ್ಗ ಜಗ್ಗಾಟ ಸ್ಪರ್ಧೆಗಳಿದ್ದು, ಎಲ್ಲಾ ವಿಭಾಗದ ವಿಜೇತ ಕ್ರೀಡಾಪಟುಗಳಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಪದಕಗಳನ್ನು ನೀಡಲಾಗುವುದು. ಪುರುಷರ ವಿಭಾಗದಲ್ಲಿ ವಾಲಿಬಾಲ್, ಕಬಡ್ಡಿ, ಕ್ರಿಕೆಟ್ ಮತ್ತು ಮಹಿಳೆಯರ ವಿಭಾಗದಲ್ಲಿ ಥ್ರೋಬಾಲ್, ಕೇರಂ, ಚೆಸ್ ಸೇರಿದಂತೆ ವಿವಿಧ ಸ್ಪರ್ಧೆಗಳು ಮತ್ತು ಬಿರು (ಚಿಟ್ ಬಿಲ್/ಗುರಿಇಡುವ ಸ್ಪರ್ಧೆ) ಸಹ ಆಯೋಜಿಸ ಲಾಗಿದ್ದು, ಸಾಂಸ್ಕೃತಿಕ ಸ್ಪರ್ಧೆಗಳೂ ನಡೆಯಲಿವೆ.
ಕನಿಷ್ಠ 10 ಮಂದಿ ಕಲಾವಿದರನ್ನು ಒಳಗೊಂಡ ಕಲಾತಂಡಗಳಿಗೆ ಗೌರವಧನ ನೀಡಲಾಗುವುದು. ಉಡುಪಿ ತಾಲೂಕಿನ ತಂಡಗಳಿಗೆ 5000ರೂ., ಬ್ರಹ್ಮಾವರ ಮತ್ತು ಕಾಪು ತಾಲೂಕಿನ ತಂಡಗಳಿಗೆ 7000, ಬೈಂದೂರು, ಕಾರ್ಕಳ, ಹೆಬ್ರಿ ಹಾಗೂ ದ.ಕನ್ನಡ ಜಿಲ್ಲೆಯ ಕಲಾ ತಂಡಗಳಿಗೆ ತಲಾ 10,000ರೂ. ನೀಡಲಾಗುವುದು. ಬುಟ್ಟಿ ಹೆಣೆಯುವ ಪ್ರಾತ್ಯಕ್ಷಿಕೆ ಸಹ ಆಯೋಜಿಸಿದ್ದು, ಪ್ರತೀ ಕಲಾವಿದರಿಗೆ 2,000 ಗೌರವಧನ ನೀಡಲಾಗುವುದು.
ಕ್ರೀಡೋತ್ಸವದಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗುವುದು. ಈಗಾಗಲೇ ಕ್ರಿಕೆಟ್‌ಗೆ 56 ತಂಡಗಳು, ವಾಲಿಬಾಲ್‌ಗೆ 35, ಥ್ರೋಬಾಲ್‌ಗೆ 25 ತಂಡಗಳು ನೊಂದಣಿ ಮಾಡಿಕೊಂಡಿವೆ. ಕ್ರೀಡೋತ್ಸವದಲ್ಲಿ ಸುಮಾರು 3000ಕ್ಕೂ ಅಧಿಕ ಕೊರಗ ಸಮುದಾಯದ ಕ್ರೀಡಾಪಟುಳು ಭಾಗವಹಿಸುವ ನಿರೀಕ್ಷೆ ಇದೆ.
ಕೊರಗ ಸಮುದಾಯದ ವೈವಿಧ್ಯಮಯ ಕಲೆ ಸಂಸ್ಕೃತಿಯನ್ನು ಅನಾವರಣ ಗೊಳಿಸುವ ಈ ಕ್ರೀಡೋತ್ಸವವನ್ನು 15 ಲಕ್ಷ ರೂ. ವೆಚ್ಚದಲ್ಲಿ ಆಯೋಜಿಸ ಲಾಗುತ್ತಿದೆ. ಕಾರ್ಯಕ್ರಮದ ಯಶಸ್ಸಿಗೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳ ಲಾಗಿದೆ. ಕೋವಿಡ್ ನಿಯಮಗಳಂತೆ ಕ್ರೀಡಾಕೂಟ ನಡೆಯುತಿದ್ದು, ಇದೇ ಪ್ರಥಮ ಬಾರಿಗೆ ಅವಿಜಿತ ಜಿಲ್ಲೆಯ ಎಲ್ಲಾ ಕೊರಗ ಸಮುದಾಯದವರು ಒಂದೆಡೆ ಸೇರಿ ಸಂಭ್ರಮಿಸಲು ಕ್ರೀಡಾಕೂಟ ವೇದಿಕೆಯಾಗಲಿದೆ. ಅಲ್ಲದೇ ಸಾರ್ವಜನಿಕರಿಗೆ ಕೊರಗ ಸಮುದಾಯದ ವೈವಿಧ್ಯಮಯ ಶ್ರೀಮಂತ ಕಲೆ ಮತ್ತು ಸಂಸ್ಕೃತಿಯನ್ನು ಆಸ್ಪಾದಿಸಲು ಅವಕಾಶ ಸಿಗಲಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ.







