83 ತೇಜಸ್ ಯುದ್ಧ ವಿಮಾನ ಖರೀದಿಗೆ ಎಚ್‍ಎಎಲ್ ಜೊತೆ ಒಪ್ಪಂದ: ರಾಜನಾಥ್ ಸಿಂಗ್

ಬೆಂಗಳೂರು, ಫೆ.3: ಕೇಂದ್ರ ಸರಕಾರವು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್‍ಎಎಲ್) ಜೊತೆ 83 ತೇಜಸ್ ಲಘು ಯುದ್ಧ ವಿಮಾನ ಖರೀದಿಗಾಗಿ 48 ಸಾವಿರ ಕೋಟಿ ರೂ.ಗಳ ಒಪ್ಪಂದಕ್ಕೆ ಬುಧವಾರ ಅಧಿಕೃತವಾಗಿ ಸಹಿ ಹಾಕಿದೆ.
ನಗರದ ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರವ ಏರೋ ಇಂಡಿಯಾ-2021 ವೈಮಾನಿಕ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ರಕ್ಷಣಾ ಇಲಾಖೆಯ ಡಿಜಿ ವಿ.ಎಲ್.ಕಾಂತರಾವ್, ಎಚ್‍ಎಎಲ್‍ನ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆರ್.ಮಾಧವನ್ ಅವರಿಗೆ ತೇಜಸ್ ಲಘು ಯುದ್ಧ ವಿಮಾನಗಳ ಖರೀದಿಯ ಒಪ್ಪಂದ ಪತ್ರವನ್ನು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮ್ಮುಖದಲ್ಲಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ತೇಜಸ್ ಯುದ್ಧ ವಿಮಾನವನ್ನು ದೇಶದ ಹೆಮ್ಮೆಯ ಸಂಸ್ಥೆಯಾಗಿರುವ ಎಚ್‍ಎಎಲ್ ಅಭಿವೃದ್ಧಿಪಡಿಸಿದೆ. ಇದು ಹಗುರ ಯುದ್ಧ ವಿಮಾನ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದರೂ ಅತೀ ಹೆಚ್ಚು ಶಕ್ತಿಯಾಗಿದೆ. ಯಾವುದೇ ಬಗೆಯ ಅಪಾಯದ ವಾತಾವರಣದಲ್ಲೂ ಅತ್ಯಂತ ಕ್ಷಮತೆಯಿಂದ ಈ ವಿಮಾನ ಕಾರ್ಯನಿರ್ವಹಿಸುವ ಸಾಮಥ್ರ್ಯವನ್ನು ಹೊಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಎಚ್‍ಎಎಲ್‍ನಿಂದ 73 ತೇಜಸ್ ಮಾರ್ಕ್-1ಎ ಮತ್ತು 10 ಎಲ್‍ಸಿಎ ಮಾರ್ಕ್-1 ತರಬೇತಿ ವಿಮಾನಗಳನ್ನು ಖರೀದಿಸುವ ಒಪ್ಪಂದಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಕಳೆದ ತಿಂಗಳು ನಡೆದ ಸಂಪುಟ ಭದ್ರತಾ ಸಮಿತಿ ಅನುಮೋದನೆ ನೀಡಿತ್ತು. ಇದೀಗ ಭಾರತೀಯ ವಾಯು ಪಡೆಯು ದೇಶಿಯವಾಗಿ ಅಭಿವೃದ್ಧಿಪಡಿಸಿದ ಹೊಸ 83 ತೇಜಸ್ ಯುದ್ಧ ವಿಮಾನಗಳನ್ನು 48 ಸಾವಿರ ಕೋಟಿ ರೂ.ಗಳ ಮೊತ್ತದಲ್ಲಿ ಖರೀದಿಸುತ್ತಿರುವುದು ಸಂತಸ ತಂದಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.







