ಮೀಸಲು ಅರಣ್ಯದಲ್ಲಿ ಮರ ಕಡಿದು ಸಾಗಾಟ: ಇಬ್ಬರ ಬಂಧನ

ಕುಂದಾಪುರ, ಫೆ.3: ಅರಣ್ಯ ಇಲಾಖೆ ಕುಂದಾಪುರ ವಿಭಾಗದ ಬೈಂದೂರು ವಲಯದ ಕಿರಿಮಂಜೇಶ್ವರ ಘಟಕದ ಕಾಲೋಡು ಗ್ರಾಮದ ಜನ್ಮನೆ ಎಂಬಲ್ಲಿ ಹೇರೂರು ಮೀಸಲು ಅರಣ್ಯದಲ್ಲಿ ಫೆ.2ರಂದು ರಾತ್ರಿ ವೇಳೆ ಅಕ್ರಮವಾಗಿ ಮರ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖಾಧಿ ಕಾರಿಗಳ ತಂಡ ಬಂಧಿಸಿದೆ.
ಹೇರೂರು ಗ್ರಾಮದ ಮಂಜುನಾಥ್ ಪೂಜಾರಿ(27) ಹಾಗೂ ರತ್ನಾಕರ ಗೌಡ(27) ಬಂಧಿತ ಆರೋಪಿಗಳು. ಇವರಿಂದ ಬೃಹತ್ ಆಕಾರದ ಹಾಗೂ ಬೆಲೆಬಾಳುವ ಕಲ್ಲಂಭೋಗಿ ಮರದ ತುಂಡು, ಮಹಿಂದ್ರ ಪಿಕ್‌ಅಪ್ ವಾಹನ ಮತ್ತು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಮೀಸಲು ಅರಣ್ಯದಲ್ಲಿ ಮರವನ್ನು ತುಂಡರಿಸಿ ವಾಹನಗಳಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದರೆನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡು ಕಾರ್ಯಾಚರಣೆ ನಡೆಸಿದ ಅಧಿಕಾರಿಗಳ ತಂಡ ಆರೋಪಿ ಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದೆ. ಬಂಧಿತ ರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನಕ್ಕೆ ವಿಧಿಸಲಾಗಿದೆ.
ಕುಂದಾಪುರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಶ್ ರೆಡ್ಡಿ ಎಂ.ವಿ., ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ಲೋಹಿತ್ ಮಾರ್ಗ ದರ್ಶನದಲ್ಲಿ ವಲಯ ಅರಣ್ಯ ಅಧಿಕಾರಿ ಟಿ.ಕಿರಣ್ ಬಾಬು ನೇತೃತ್ವದಲ್ಲಿ ಉಪ ವಲಯ ಅರಣ್ಯ ಅಧಿಕಾರಿಗಳಾದ ಸದಾಶಿವ ಕೆ., ರವಿರಾಜ ಬಿ., ಅರಣ್ಯ ರಕ್ಷಕರಾದ ಶಿವಪ್ಪ ಎಸ್.ಹಾವನೂರ್, ಮಹೇಶ ಎಸ್.ಮಲ್ಲಾಡದ್, ಅಂಬೇಶ್ ಕಾರಭಾರಿ, ಶಂಕರಪ್ಪಡಿ.ಎಲ್., ಅರಣ್ಯ ವೀಕ್ಷಕ ಸುರೇಶ ಹಾಗೂ ಚಾಲಕ ಪ್ರಕಾಶ ಈ ಕಾರ್ಯಚರಣೆ ನಡೆಸಿದ್ದಾರೆ.







