‘ರೈತರ ನರಮೇಧ ’ಹ್ಯಾಷ್‌ಟ್ಯಾಗ್‌ಗೆ ಸಂಬಂಧಿಸಿದ ಖಾತೆ, ಟ್ವೀಟ್‌ಗಳನ್ನು ತೆಗೆದುಹಾಕಿ ಇಲ್ಲವೇ ಕ್ರಮವನ್ನು ಎದುರಿಸಿ'
ಟ್ವಿಟರ್‌ಗೆ ಕೇಂದ್ರದ ಎಚ್ಚರಿಕೆ

ಹೊಸದಿಲ್ಲಿ,ಫೆ.3: ರೈತರ ಪ್ರತಿಭಟನೆಗೆ ಸಂಬಂಧಿಸಿದ ನಿರ್ದಿಷ್ಟ ಹ್ಯಾಷ್‌ಟ್ಯಾಗ್‌ನ್ನು ಬಳಸಿದ್ದ ಖಾತೆಗಳನ್ನು ಮರುಸ್ಥಾಪನೆ ಮಾಡಿದ್ದಕ್ಕಾಗಿ ಕೇಂದ್ರವು ಬುಧವಾರ ಟ್ವಿಟರ್‌ಗೆ ನೋಟಿಸ್‌ನ್ನು ಹೊರಡಿಸಿದೆ. ಇಂತಹ ಸುಮಾರು 250 ಖಾತೆಗಳನ್ನು ಸ್ಥಗಿತಗೊಳಿಸುವಂತೆ ಸರಕಾರವು ಸೋಮವಾರ ಟ್ವಿಟರ್‌ಗೆ ನಿರ್ದೇಶ ನೀಡಿತ್ತು.
ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 69ಎ ಅಡಿ ನೀಡಲಾಗಿದ್ದ ನಿರ್ದೇಶಗಳನ್ನು ಪಾಲಿಸದಿದ್ದರೆ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಟ್ವಿಟರ್‌ಗೆ ಎಚ್ಚರಿಕೆ ನೀಡಿದೆ.
'#ModiPlanningFarmerGenocide' ಹ್ಯಾಷ್‌ಟ್ಯಾಗ್‌ನ್ನು ಬ್ಲಾಕ್ ಮಾಡುವಂತೆ ನಿರ್ದೇಶವು ಸಾರ್ವಜನಿಕ ಸುವ್ಯವಸ್ಥೆ ಮತ್ತು ದೇಶದ ಭದ್ರತೆಗೆ ಸಂಬಂಧಿಸಿದಂತೆ ಸಂಜ್ಞೇಯ ಅಪರಾಧಗಳನ್ನು ನಡೆಸಲು ಜನರನ್ನು ಪ್ರಚೋದಿಸುತ್ತಿರುವುದು ಕಂಡು ಬಂದಿದೆ. ಸದ್ರಿ ಕ್ರಮದ ಅಸಾಧ್ಯತೆ ಮತ್ತು ಅಸಮಾನತೆಯ ಬಗ್ಗೆ ಕೇಂದ್ರ ಸರಕಾರದ ಆದೇಶಗಳಿಗೆ ಬದ್ಧವಾಗಿರುವ ಮಧ್ಯವರ್ತಿಯಾಗಿರುವ ಟ್ವಿಟರ್ ನಿರ್ಧರಿಸುವಂತಿಲ್ಲ ಎಂದು ಸಚಿವಾಲಯವು ಟ್ವಿಟರ್‌ಗೆ ನೀಡಿರುವ ನೋಟಿಸ್‌ನಲ್ಲಿ ತಿಳಿಸಿದೆ. ಸಾರ್ವಜನಿಕ ಸುವ್ಯವಸ್ಥೆಯ ಮೇಲೆ ಪರಿಣಾಮವನ್ನುಂಟು ಮಾಡುವ ವಿಷಯಗಳ ಬಗ್ಗೆ ಅಧಿಕಾರಿಗಳ ನಿರ್ದೇಶಗಳ ಪಾಲನೆಗೆ ಟ್ವಿಟರ್ ಬದ್ಧವಾಗಿದೆ. ಟ್ವಿಟರ್ ನ್ಯಾಯಾಲಯದ ಪಾತ್ರವನ್ನು ವಹಿಸುವಂತಿಲ್ಲ ಮತ್ತು ನಿರ್ದೇಶಗಳನ್ನ ಪಾಲಿಸದಿರುವುದನ್ನು ಸಮರ್ಥಿಸಿಕೊಳ್ಳುವಂತಿಲ್ಲ. ಸರಕಾರದ ಆದೇಶಗಳನ್ನು ಪಾಲಿಸದ್ದಕ್ಕಾಗಿ ಅದು ದಂಡನಾ ಕ್ರಮವನ್ನು ಎದುರಿಸಬೇಕಾಗಬಹುದು ಎಂದು ತಿಳಿಸಿರುವ ಸರಕಾರವು,ನಿರ್ದಿಷ್ಟ ಖಾತೆಗಳನ್ನು ಮತ್ತು ಟ್ವೀಟ್‌ಗಳನ್ನು ತಡೆಹಿಡಿಯುವಂತೆ ಆದೇಶಗಳ ಹೊರತಾಗಿಯೂ ಟ್ವಿಟರ್ ಅವುಗಳನ್ನು ಏಕಪಕ್ಷೀಯವಾಗಿ ಮರುಸ್ಥಾಪಿಸಿದೆ ಎಂದು ಆರೋಪಿಸಿದೆ.
'#ModiPlanningFarmerGenocide' ರೈತರ ಪ್ರತಿಭಟನೆ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿ ಉಲ್ಬಣಗೊಳ್ಳುವುದನ್ನು ತಡೆಯಲು ಕೆಲವು ಹ್ಯಾಂಡಲ್‌ಗಳನ್ನು ಬ್ಲಾಕ್ ಮಾಡುವಂತೆ ಗೃಹ ಸಚಿವಾಲಯ ಮತ್ತು ಕಾನೂನು ಜಾರಿ ಏಜೆನ್ಸಿಗಳು ಟ್ವಿಟರ್‌ಗೆ ನಿರ್ದೇಶ ನೀಡಿದ್ದವು. ಪರಿಣಾಮವಾಗಿ ಟ್ವಿಟರ್ ಸೋಮವಾರ ಹ್ಯಾಷ್‌ಟ್ಯಾಗ್‌ನೊಂದಿಗೆ ಟ್ವೀಟಿಸುತ್ತಿದ್ದ ಅಥವಾ ಮರುಟ್ವೀಟಿಸುತ್ತಿದ್ದ ಹಾಗೂ ‘ಸುಳ್ಳು,ಭೀತಿ ಹುಟ್ಟಿಸುವ ಮತ್ತು ಪ್ರಚೋದನಕಾರಿ’ಪೋಸ್ಟ್‌ಗಳನ್ನು ಮಾಡುತ್ತಿರುವ ಆರೋಪ ಎದುರಿಸುತ್ತಿದ್ದ ಸುಮಾರು 250 ಖಾತೆಗಳನ್ನು ಬ್ಲಾಕ್ ಮಾಡಿತ್ತು. ಕಾರವಾನ್ ಮ್ಯಾಗಝಿನ್ ಮತ್ತು ಕಿಸಾನ ಏಕ್ತಾ ಮೋರ್ಚಾ,ಭಾರತಿಯ ಕಿಸಾನ ಯೂನಿಯನ್ ಏಕ್ತಾ ಉಗ್ರಹಾನ್,ಟ್ರಾಕ್ಟರ್ ಟು ಟ್ವಿಟರ್,ಪುದುಚೇರಿ ಸಿಪಿಎಂ ಘಟಕ,ಸಿಪಿಎಂ ಸದಸ್ಯ ಮುಹಮ್ಮದ್ ಸಲೀಂ ಅವರ ಟ್ವಿಟರ್ ಹ್ಯಾಂಡಲ್‌ಗಳೂ ಇವುಗಳಲ್ಲಿ ಸೇರಿದ್ದವು. ಆದರೆ ಕೆಲವೇ ಘಂಟೆಗಳ ಬಳಿಕ ಇವುಗಳನ್ನು ಮರುಸ್ಥಾಪಿಸಲಾಗಿತ್ತು.
ಗಣತಂತ್ರ ದಿನದಂದು ದಿಲ್ಲಿಯಲ್ಲಿ ಟ್ರಾಕ್ಟರ್ ರ್ಯಾಲಿ ಸಂದರ್ಭದಲ್ಲಿ ಹಿಂಸಾಚಾರಗಳು ನಡೆದ ಬಳಿಕ ಸರಕಾರವು ರೈತರ ಪ್ರತಿಭಟನೆಗಳಿಗೆ ಕಡಿವಾಣ ಹಾಕಿದೆ. ಹರ್ಯಾಣ ಮತ್ತು ಉತ್ತರ ಪ್ರದೇಶದೊಂದಿಗಿನ ದಿಲ್ಲಿಯ ಗಡಿಗಳಲ್ಲಿ ಕಂದಕಗಳನ್ನು ತೋಡುವ,ರಸ್ತೆಗಳಲ್ಲಿ ಮೊಳೆಗಳನ್ನು ನೆಡುವ ಮತ್ತು ಕಾಂಕ್ರೀಟ್ ಬ್ಯಾರಿಕೇಡ್‌ಗಳಿಗೆ ಮುಳ್ಳುತಂತಿಯ ಬೇಲಿಗಳನ್ನು ಅಳವಡಿಸುವ ಮೂಲಕ ಪ್ರತಿಭಟನಾ ಸ್ಥಳಗಳಿಗೆ ಪ್ರವೇಶಕ್ಕೆ ಅಡ್ಡಿಯನ್ನುಂಟು ಮಾಡಲು ದಿಲ್ಲಿ ಪೊಲೀಸರೂ ಪ್ರಯತ್ನಿಸಿದ್ದಾರೆ. ಮೂರು ಪ್ರತಿಭಟನಾ ಸ್ಥಳಗಳಾದ ಸಿಂಘು,ಘಾಜಿಪುರ ಮತ್ತು ಟಿಕ್ರಿಗಳಲ್ಲಿ ಭಾರೀ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಗಳನ್ನೂ ನಿಯೋಜಿಸಲಾಗಿದೆ. ಈ ಮೂರು ಗಡಿ ಪ್ರದೇಶಗಳಲ್ಲಿ ಅಂತರ್ಜಾಲ ಸೇವೆಯ ಸ್ಥಗಿತಕ್ಕೆ ಕೇಂದ್ರ ಗೃಹ ಸಚಿವಾಲಯವು ಶನಿವಾರ ಆದೇಶಿಸಿದ್ದರೆ,ಹರ್ಯಾಣ ಸರಕಾರವು ಏಳು ಜಿಲ್ಲೆಗಳಲ್ಲಿ ಸಂಪರ್ಕಗಳನ್ನು ಕಡಿತಗೊಳಿಸಿದೆ.







