ಸಚಿವರು, ಅಧಿಕಾರಿಗಳ ಗೈರಿಗೆ ಆಕ್ಷೇಪಿಸಿದ ಸಿದ್ದರಾಮಯ್ಯ

ಬೆಂಗಳೂರು, ಫೆ.3: ರಾಜ್ಯಪಾಲರ ಭಾಷಣದ ಮೇಲೆ ವಿಪಕ್ಷದ ನಾಯಕ ನಾನು, ಮಾತನಾಡುವ ವೇಳೆ ಮುಖ್ಯಮಂತ್ರಿ, ಸಚಿವರು ಮತ್ತು ಅಧಿಕಾರಿಗಳು ಯಾರೂ ಇಲ್ಲ. ಹೀಗಾದರೆ ಯಾವ ಪುರುಷಾರ್ಥಕ್ಕೆ ಸದನ ಕರೆಯಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ವಿಧಾನಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಒಂದಿಬ್ಬರು ಸಚಿವರನ್ನು ಹೊರತುಪಡಿಸಿದರೆ ಸಚಿವರು ಇರಲಿಲ್ಲ. ಅಲ್ಲದೆ, ಅಧಿಕಾರಿಗಳ ಗ್ಯಾಲರಿಯಲ್ಲಿಯೂ ಯಾರೂ ಇರಲಿಲ್ಲ. ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ಮಾಡುತ್ತಿದ್ದೇವೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಜರಿರಬೇಕು. ಅವರೆಲ್ಲ ಏರ್ ಶೋ ನೋಡಲು ತೆರಳಿದ್ದಾರೆಯೇ? ಎಂದು ಪ್ರಶ್ನೆ ಮಾಡಿದರು.
ಒಬ್ಬೇ ಒಬ್ಬ ಅಧಿಕಾರಿ ಇಲ್ಲ ಎಂದರೆ ಸರಕಾರ ಇದೆಯೋ, ಇಲ್ಲವೋ ಎಂಬ ಅನುಮಾನ ಮೂಡುತ್ತಿದೆ. ಅವರಿಗೆ ಹೇಳುವವರು, ಕೇಳುವವರು ಯಾರೂ ಇಲ್ಲ ಎಂದ ಸಿದ್ದರಾಮಯ್ಯ, ನಾವು ರಾಜ್ಯದ ಹಿತದ ಬಗ್ಗೆ ಚರ್ಚಿಸುತ್ತಿದ್ದೇವೆ. ಅಧಿಕಾರಿಗಳೇ ಇಲ್ಲ ಎಂದರೆ ಹೇಗೆ? ನಾವು ಇವತ್ತು ಇಲ್ಲಿ, ನಾಳೆ ಅಲ್ಲಿಗೆ ಬರಬಹುದು, ನೀವು ಇಲ್ಲಿಗೆ ಬರಬಹುದು. ಆದರೆ, ಅಧಿಕಾರಿಗಳು ಇಲ್ಲೇ ಇರುತ್ತಾರೆ. ಅಧಿಕಾರಿಗಳು ಇಲ್ಲವೆಂದರೆ ಯಾರಿಗೆ ಭಾಷಣ ಮಾಡಬೇಕು ಎಂದು ಕೇಳಿದರು.
ವಿಪಕ್ಷ ನಾಯಕ ಮಾತನಾಡುವ ವೇಳೆ ಸರಕಾರದ ಮುಖ್ಯ ಕಾರ್ಯದರ್ಶಿಗಳಿಲ್ಲ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳೂ ಇಲ್ಲ. 12 ರಿಂದ 13 ಮಂದಿ ಹೆಚ್ಚುವರಿ ಕಾರ್ಯದರ್ಶಿಗಳು ಇರಬೇಕು. ಒಬ್ಬರೂ ಇಲ್ಲ ಎಂದರೆ ಇದೇನು ಸರಕಾರವೇ? ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಇದಕ್ಕೆ ಧ್ವನಿಗೂಡಿಸಿದ ಹಿರಿಯ ಸದಸ್ಯ ಕೆ.ಆರ್. ರಮೇಶ್ ಕುಮಾರ್ ಮಾತನಾಡಿ, ಕಲಾಪದ ಸಂದರ್ಭದಲ್ಲಿ ಅಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ಈ ರೀತಿ ಗೈರಾಗುವುದು ಯಾರಿಗೂ ಶೋಭೆ ತರುವುದಿಲ್ಲ. ಇದು ಸದನಕ್ಕೆ ಮಾಡುವ ಅಗೌರವ. ಕೂಡಲೇ ಅಧಿಕಾರಿಗಳನ್ನು ಸದನಕ್ಕೆ ಕರೆಸಬೇಕು ಎಂದು ಸ್ಪೀಕರ್ ಪೀಠದಲ್ಲಿದ್ದ ಕುಮಾರ್ ಬಂಗಾರಪ್ಪ ಅವರಿಗೆ ಮನವಿ ಮಾಡಿದರು.
ಅಧಿಕಾರಿಗಳು ಮತ್ತು ಸರಕಾರಕ್ಕೆ ಸೂಚನೆ ನೀಡಿದ ಸ್ಪೀಕರ್ ಪೀಠದಲ್ಲಿದ್ದ ಕುಮಾರ್ ಬಂಗಾರಪ್ಪ, ಕೂಡಲೇ ಅಧಿಕಾರಿಗಳು ಮತ್ತು ಸಚಿವರನ್ನು ಬರಲಿಕ್ಕೆ ಹೇಳಿ ಎಂದರು. ಆ ವೇಳೆಗೆ ಕಾನೂನು ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಹಣಕಾಸು ಇಲಾಖೆ ಅಧಿಕಾರಿಗಳು ಧಾವಿಸಿ ಬಂದರು.







