ಮ್ಯಾನ್ಮಾರ್‌ಗೆ ಕೊಟ್ಟ 2,550 ಕೋಟಿ ರೂ. ವಾಪಸ್ ಪಡೆಯುವುದು ಹೇಗೆ? ಐಎಂಎಫ್‌ಗೆ ಚಿಂತೆ

ವಾಶಿಂಗ್ಟನ್, ಫೆ. 3: ಕೊರೋನ ವೈರಸ್ ಸಾಂಕ್ರಾಮಿಕದ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ನೆರವಾಗುವುದಕ್ಕಾಗಿ ಅಂತರ್‌ರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯು ಕಳೆದ ವಾರ ಮ್ಯಾನ್ಮಾರ್‌ಗೆ 350 ಮಿಲಿಯ ಡಾಲರ್ (ಸುಮಾರು 2,550 ಕೋಟಿ ರೂಪಾಯಿ) ತುರ್ತು ನೆರವು ನೀಡಿದ ಬಳಿಕ ಈಗ ಸಂಕಷ್ಟಕ್ಕೆ ಸಿಲುಕಿದೆ.
ಅದಾದ ದಿನಗಳ ಬಳಿಕ, ಮ್ಯಾನ್ಮಾರ್ ಸೇನೆಯು ಸೋಮವಾರ ಕ್ಷಿಪ್ರಕ್ರಾಂತಿಯ ಮೂಲಕ ಚುನಾಯಿತ ಸರಕಾರದ ಅಧಿಕಾರವನ್ನು ಕಸಿದುಕೊಂಡು ದೇಶದ ನಾಯಕಿ ಆಂಗ್ ಸಾನ್ ಸೂ ಕಿ ಮತ್ತು ಇತರ ಚುನಾಯಿತ ಪ್ರತಿನಿಧಿಗಳನ್ನು ಬಂಧಿಸಿದೆ.
ಐಎಂಎಫ್ ಈ ಹಣವನ್ನು ಯಾವುದೇ ಶರತ್ತುಗಳಿಲ್ಲದೆ, ಕೋವಿಡ್-19 ತುರ್ತು ಪರಿಹಾರದ ಭಾಗವಾಗಿ ಮ್ಯಾನ್ಮಾರ್‌ಗೆ ನೀಡಿತ್ತು. ಈ ಪರಿಹಾರ ಕಾರ್ಯಕ್ರಮಕ್ಕೆ ಐಎಂಎಫ್ ನಿರ್ದೇಶಕರ ಮಂಡಳಿಯು ಜನವರಿ 13ರಂದು ಅಂಗೀಕಾರ ನೀಡಿತ್ತು.
ಈಗ ಆ ಹಣವನ್ನು ವಾಪಸ್ ಪಡೆಯುವ ಯಾವುದೇ ದಾರಿ ಐಎಂಎಫ್ ಬಳಿ ಇಲ್ಲ ಎನ್ನಲಾಗಿದೆ.
‘‘ಮ್ಯಾನ್ಮಾರ್‌ನಲ್ಲಿ ಸಂಭವಿಸುತ್ತಿರುವ ಬೆಳವಣಿಗೆಗಳನ್ನು ನಾವು ನಿಕಟವಾಗಿ ಗಮನಿಸುತ್ತಿದ್ದೇವೆ. ಅಲ್ಲಿನ ಬೆಳವಣಿಗೆಗಳು ಆರ್ಥಿಕತೆಯ ಮೇಲೆ ಹಾಗೂ ಅಲ್ಲಿನ ಜನರ ಮೇಲೆ ಬೀರುವ ಪರಿಣಾಮಗಳ ಬಗ್ಗೆ ನಾವು ಕಳವಳ ಹೊಂದಿದ್ದೇವೆ’’ ಎಂದು ಐಎಂಎಫ್ ವಕ್ತಾರರೊಬ್ಬರು ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಕ್ಷಿಪ್ರಕ್ರಾಂತಿ ಅನಿವಾರ್ಯವಾಗಿತ್ತು: ಸೇನಾ ಮುಖ್ಯಸ್ಥ
ಆಂಗ್ ಸಾನ್ ಸೂ ಕಿ ಸರಕಾರದ ಪದಚ್ಯುತಿ ಅನಿವಾರ್ಯವಾಗಿತ್ತು ಎಂದು ಮ್ಯಾನ್ಮಾರ್ ಸೇನಾ ಮುಖ್ಯಸ್ಥ ಜನರಲ್ ಮಿನ್ ಆಂಗ್ ಹಲೈಂಗ್ ಮಂಗಳವಾರ ಹೇಳಿದ್ದಾರೆ.
ಸೋಮವಾರದ ಕ್ಷಿಪ್ರಕ್ರಾಂತಿಯ ಬಳಿಕ, ದೇಶದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಅಧಿಕಾರಗಳನ್ನು ಜನರಲ್ ಮಿನ್ ಆಂಗ್ ಹಲೈಂಗ್ ವಹಿಸಿಕೊಂಡಿದ್ದಾರೆ. ಇದರೊಂದಿಗೆ ದೇಶವು 10 ವರ್ಷಗಳ ಪ್ರಜಾಪ್ರಭುತ್ವದ ಬಳಿಕ ಮತ್ತೆ ಸೇನೆಯ ತೆಕ್ಕೆಗೆ ಜಾರಿದೆ.
ಚುನಾವಣಾ ವಂಚನೆಗೆ ಸಂಬಂಧಿಸಿ ಸೇನೆ ವ್ಯಕ್ತಪಡಿಸಿದ ಕಳವಳಕ್ಕೆ ಸೂಕ್ತವಾಗಿ ಸ್ಪಂದಿಸಲು ಸರಕಾರ ವಿಫಲವಾದ ಬಳಿಕ, ‘ಕಾನೂನಿಗೆ ಅನುಗುಣವಾಗಿಯೇ’ ಸೇನೆಯು ಅಧಿಕಾರವನ್ನು ವಶಪಡಿಸಿಕೊಂಡಿದೆ ಎಂದು ಕ್ಷಿಪ್ರಕ್ರಾಂತಿಯ ಬಳಿಕ ನೀಡಿದ ತನ್ನ ಮೊದಲ ಹೇಳಿಕೆಯಲ್ಲಿ ಸೇನಾಧಿಕಾರಿ ಹೇಳಿದ್ದಾರೆ.