ಗೋ ಹತ್ಯೆ ನಿಷೇಧ ತಿದ್ದುಪಡಿ ವಿಧೇಯಕ ಮಂಡನೆಗೆ ಪರಿಷತ್‍ನಲ್ಲಿ ಕಾಂಗ್ರೆಸ್, ಜೆಡಿಎಸ್ ಸದಸ್ಯರ ಒತ್ತಾಯ
ಬೆಂಗಳೂರು, ಫೆ.3: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕ ಮಂಡನೆ ಕುರಿತು ಸಿ.ಎಂ.ಇಬ್ರಾಹಿಂ ಹಾಗೂ ಮರಿತಿಬ್ಬೇಗೌಡ ಒತ್ತಾಯಿಸಿದ ಪ್ರಸಂಗ ನಡೆಯಿತು.
ಬುಧವಾರ ವಿಧಾನಪರಿಷತ್‍ನ ಮಧ್ಯಾಹ್ನದ ಕಲಾಪ ಆರಂಭವಾಗುತ್ತಿದ್ದಂತೆ ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ವಿಧೇಯಕವನ್ನು ಮಂಡಿಸುವುದರ ಬಗ್ಗೆ ಸಭಾನಯಕ ಶ್ರೀನಿವಾಸ್ ಪೂಜಾರಿಗೆ ಕೇಳಿದರು. ಇದಕ್ಕೆ, ಸಂಬಂಧಪಟ್ಟ ಸಚಿವರು ಸದನದಲ್ಲಿ ಇಲ್ಲದ ಕಾರಣ ಈ ವಿಧೇಯಕವನ್ನು ಮುಂದಿನ ದಿನಗಳಲ್ಲಿ ಮಂಡಿಸಲಾಗುವುದೆಂದು ತಿಳಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ, ಪ್ರತಿಸಲದ ಅಜೆಂಡಾದಲ್ಲಿ ಗೋ ಹತ್ಯೆ ನಿಷೇಧ ತಿದ್ದುಪಡಿ ವಿಧೇಯಕ ಬರುತ್ತದೆ, ಮತ್ತೆ ಅದನ್ನು ಮುಂದೂಡಲಾಗುತ್ತದೆ. ಇದು ಸರಿಯಲ್ಲ. ಈ ಬಗ್ಗೆ ಸರಿಯಾದ ಸ್ಪಷ್ಟನೆ ನೀಡಬೇಕೆಂದು ಒತ್ತಾಯಿಸಿದೆ.
ಇದಕ್ಕೆ ಧ್ವನಿಗೂಡಿಸಿದ ಕಾಂಗ್ರೆಸ್ ಹಿರಿಯ ಸದಸ್ಯ ಸಿ.ಎಂ.ಇಬ್ರಾಹಿಂ, ಗೋ ಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆ ಈ ಅಧಿವೇಶನದಲ್ಲಿ ಮಂಡಿಸುತ್ತಿರೋ ಇಲ್ಲವೇ ಮುಂದಿನ ಅಧಿವೇಶನದಲ್ಲಿ ಮಂಡಿಸುತ್ತಿರೋ ಎಂಬುದನ್ನಾದರು ಖಚಿತ ಪಡಿಸಬೇಕೆಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶ್ರೀನಿವಾಸ ಪೂಜಾರಿ, ಈ ವಿಧೇಯಕ ಮಂಡನೆಯ ಕುರಿತು ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಜೊತೆ ಚರ್ಚೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಮಂಡಿಸುತ್ತೇವೆಂದು ತಿಳಿಸಿದರು.







