ಹಣಕಾಸು ಹಿಡಿತ ತೃಪ್ತಿ ತಂದಿಲ್ಲ, ನಷ್ಟವೇ ಹೆಚ್ಚಾಗಿದೆ ಎಂದ ಸಿಎಜಿ ವರದಿ
ಬೆಂಗಳೂರು, ಫೆ.3: ಹೂಡಿಕೆ, ಆರ್ಥಿಕತೆ ಸದೃಢವಾಗಿದೆ ಎಂದು ಹೇಳುತ್ತಿರುವ ರಾಜ್ಯ ಸರಕಾರದ ಇಲಾಖೆಗಳಲ್ಲಿ ಹಣಕಾಸು ನಿಯಮಗಳ ಮತ್ತು ನಿರ್ದೇಶನಗಳ ಅನುಪಾಲನೆ ತೃಪ್ತಿ ತಂದಿಲ್ಲ. ಇನ್ನು, ಕೆಲ ಉದ್ದಿಮೆಗಳಲ್ಲಿ ನಷ್ಟವೇ ಹೆಚ್ಚು ಎನ್ನುವ ಮೂಲಕ ಕೇಂದ್ರ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕ ಪರಿಶೋಧಕರ (ಸಿಎಜಿ) ವರದಿ ರಾಜ್ಯ ಸರಕಾರಕ್ಕೆ ಚಾಟಿ ಬೀಸಿದೆ.
ರಾಜ್ಯ ಹಣಕಾಸು, ಇಂಧನ, ವಾಣಿಜ್ಯ ಮತ್ತು ಕೈಗಾರಿಕೆ, ಸಾರಿಗೆ, ತೋಟಗಾರಿಕೆ, ಅರಣ್ಯ, ಐಟಿ ಮತ್ತು ಬಿಟಿ, ಲೋಕೋಪಯೋಗಿ, ಬಂದರು, ಒಳನಾಡು ಸಾರಿಗೆ, ಪ್ರವಾಸೋದ್ಯಮದ ಆಡಳಿತಾತ್ಮಕ ಇಲಾಖೆಗೆ ಸಂಬಂಧಿಸಿ 2019ನೆ ಸಾಲಿನ ಮಾ.31ಕ್ಕೆ ಕೊನೆಗೊಂಡಂತೆ ಸಿಎಜಿ ವರದಿ ಬುಧವಾರ ಬಿಡುಗಡೆ ಮಾಡಲಾಯಿತು.
ರಾಜ್ಯ ಸರಕಾರದ ಇಲಾಖೆಗಳಲ್ಲಿನ ಹಣ ದುರುಪಯೋಗ, ನಷ್ಟ, ದುರ್ಬಳಕೆ ಮುಂತಾದ ಪ್ರಕರಣಗಳ ಇಲಾಖಾ ತನಿಖೆಗಳನ್ನು ರಾಜ್ಯ ಸರಕಾರ ಚುರುಕುಗೊಳಿಸಬೇಕು ಎಂಬುದು ಪ್ರಮುಖ ಶಿಫಾರಸಾಗಿದೆ.
ವರದಿ ಬಿಡುಗಡೆ ಕುರಿತು ಇಲ್ಲಿನ ಮಹಾಲೆಕ್ಕ ಪರಿಶೋಧಕರ ಕಚೇರಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಹಾಲೇಖಪಾಲಕ ಅನೂಪ್ ಫ್ರಾನ್ಸಿಸ್ ಡುಂಗ್‍ಡುಂಗ್, ನಾನಾ ಇಲಾಖೆಗಳಲ್ಲಿನ ಆಂತರಿಕ ನಿಯಂತ್ರಣ ಬಲಪಡಿಸುವುದರೊಂದಿಗೆ, ನಷ್ಟದ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಬೇಕಿದೆ. ಲೆಕ್ಕ ಸುಧಾರಣೆ, ಹಣಕಾಸು ಆಯೋಗದ ಶಿಫಾರಸಿನಂತೆ ದತ್ತಾಂಶ ಸಂಗ್ರಹಿಸುವ ಅಗತ್ಯವಿದೆ ಎಂದರು.
ಸಾ.ವ.ಉದ್ಯಮಗಳು: ರಾಜ್ಯದ 114 ಕಾರ್ಯನಿರತ ಸಾರ್ವಜನಿಕ ವಲಯ ಉದ್ಯಮಗಳಲ್ಲಿ ಬಂಡವಾಳ ಮತ್ತು ದೀರ್ಘಾವಧಿ ಸಾಲಗಳು ಸೇರಿದಂತೆ ಒಟ್ಟು 1,32,841.77 ಕೋಟಿ ಆಗಿತ್ತು. ಈ ಪೈಕಿ ವಿದ್ಯುತ್ ವಲಯ ಸಾರ್ವಜನಿಕ ಉದ್ಯಮಗಳಲ್ಲಿ 55,573.93 ಕೋಟಿ ಹೂಡಿಕೆಯಾಗಿದೆ. ಇನ್ನು ವಿದ್ಯುತ್ ವಲಯಕ್ಕೆ ಸಂಬಂಧಿತ 11 ಸಾ.ವ.ಉದ್ಯಮಗಳ ಪೈಕಿ 5 ಉದ್ದಿಮೆಗಳು 1,086.71 ಕೋಟಿ ಲಾಭ ಗಳಿಸಿದರೆ, 6 ಉದ್ದಿಮೆಗಳು ಸುಮಾರು 2,928.68 ಕೋಟಿ ಮೊತ್ತದಷ್ಟು ನಷ್ಟ ಹೊಂದಿವೆ.
ಅದೇ ರೀತಿ, ಕಾರ್ಯನಿರತ 90 ಸಾರ್ವಜನಿಕ ವಲಯದ ಉದ್ದಿಮೆ ಪೈಕಿ 49 ಸಾರ್ವಜನಿಕ ಉದ್ದಿಮೆಗಳು 875.09 ಕೋಟಿ ಮತ್ತೊಂದಷ್ಟು ಲಾಭ ಪಡೆದಿದ್ದರೆ, ಇಳಿದ 28 ಉದ್ದಿಮೆಗಳು ಬರೋಬ್ಬರಿ 1,374.11 ಕೋಟಿ ನಷ್ಟವನ್ನು ಭರಿಸಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
2018-19ನೇ ಸಾಲಿನಲ್ಲಿ ಇತ್ತೀಚಿನ ಅಂತಿಮರೂಪಕ್ಕೆ ತರಲಾದಂತಹ ಲೆಕ್ಕಪತ್ರಗಳ ಪ್ರಕಾರ 70,599.16 ಕೋಟಿ ಮೊತ್ತದಷ್ಟು ವಹಿವಾಟು ದಾಖಲಾಗಿದ್ದು, ಕಾರ್ಯನಿರತ ಸಾರ್ವಜನಿಕ ಉದ್ದಿಮೆಗಳ ವಹಿವಾಟು ರಾಜ್ಯದ ಒಟ್ಟು ದೇಶೀಯ ಉತ್ಪನ್ನದ(ಜಿಡಿಪಿ) ಶೇಕಡ 5.01ಕ್ಕೆ ಸಮನಾಗಿತ್ತು ಎಂದು ಅನೂಪ್ ಫ್ರಾನ್ಸಿಸ್ ತಿಳಿಸಿದರು.







