ಮಾಧ್ಯಮಗಳು ಕಾರ್ಪೊರೇಟ್ ಶಕ್ತಿಗಳಿಗೆ, ಆಡಳಿತ ಪಕ್ಷಗಳಿಗೆ ಮಾರಾಟವಾಗಿವೆ: ದಿನೇಶ್ ಅಮೀನ್ ಮಟ್ಟು

ಬೆಂಗಳೂರು, ಫೆ.3: ಇಂದಿರಾ ಗಾಂಧಿ ಅವರು ದೇಶದ ಮೇಲೆ ಹೇರಿದ್ದ ತುರ್ತು ಪರಿಸ್ಥಿತಿ ಕಾಲದಲ್ಲೂ ಮಾಧ್ಯಮಗಳು ಇದ್ದರೂ ಅವುಗಳು ಮಾರಾಟವಾಗಿರಲಿಲ್ಲ. ಆದರೆ, ಇಂದಿನ ಮಾಧ್ಯಮಗಳು ಕಾರ್ಪೊರೇಟ್ ಶಕ್ತಿಗಳಿಗೆ ಹಾಗೂ ಆಡಳಿತ ಪಕ್ಷಗಳಿಗೆ ಮಾರಾಟವಾಗಿವೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಪಟ್ಟಿದ್ದಾರೆ.
ಬುಧವಾರ ನಗರದ ಅಲುಮ್ನಿ ಸಭಾಂಗಣದಲ್ಲಿ ಸಮಾನ ಮನಸ್ಕರು ಆಯೋಜಿಸಿದ್ದ ಪತ್ರಕರ್ತರು, ಚಿಂತಕರನ್ನು ಬಂಧಿಸಿದ ವಿರುದ್ಧ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿಯವರೆಗೆ ಒಂದೇ ಒಂದು ಮಾಧ್ಯಮಗೋಷ್ಠಿಯನ್ನು ನಡೆಸಿಲ್ಲ. ಆದರೂ ಮಾಧ್ಯಮಗಳು ಅವರ ಕುರಿತಾಗಿಯೇ ಹೆಚ್ಚು ಸುದ್ದಿಗಳನ್ನು ಪ್ರಸಾರ ಮಾಡುತ್ತಿವೆ. ಇದರಿಂದ, ಮಾಧ್ಯಮಗಳ ಮೇಲಿದ್ದ ಗೌರವ ತೀರಾ ಕಡಿಮೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಾಂಗ, ನ್ಯಾಯಾಂಗ, ಮಾಧ್ಯಮಗಳ ಮೇಲಿನ ವಿಶ್ವಾಸ ಕಡಿಮೆಯಾಗುತ್ತಿದ್ದು, ಸಮಸ್ಯೆಗಳ ವಿರುದ್ಧ ಧ್ವನಿ ಎತ್ತುವ ಪತ್ರಕರ್ತರು, ಸಾಹಿತಿಗಳನ್ನು ಬಂಧಿಸಿ ಜೈಲಿಗೆ ಹಾಕುತ್ತಿದ್ದಾರೆ. ಪುಲ್ವಾಮ ದಾಳಿಯ ಬಗ್ಗೆ ಮೊದಲೇ ನನಗೆ ಗೊತ್ತಿತ್ತು ಎನ್ನುವವರ ವಿರುದ್ಧ ಯಾವುದೇ ಪ್ರಕರಣವನ್ನು ದಾಖಲಿಸದೇ ಹೊರಗಡೆ ತಿರುಗಾಡಲು ಬಿಟ್ಟಿದ್ದಾರೆ ಎಂದು ಕಿಡಿಕಾರಿದರು.
ಸದ್ಯದ ಪರಿಸ್ಥಿತಿಯಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಇರುವ ಸಜ್ಜನರು ಮೌನವನ್ನು ಬಿಟ್ಟು ಮಾತನಾಡದಿದ್ದರೆ ಕಡಿಮೆ ಸಂಖ್ಯೆಯಲ್ಲಿ ಇರುವ ದುರ್ಜನರ ಆರ್ಭಟ ಹೆಚ್ಚಾಗುತ್ತದೆ. ಗೋದಿ ಮಾಧ್ಯಮಗಳ ತೋಡೆ ಮೇಲೆ ಏರಿ ನಿಲ್ಲಬೇಕು. ಇಲ್ಲವೋ ಅವರ ಕಾಲಿನ ಕೆಳಗೆ ಬಿದ್ದು ಸಾಯಬೇಕಾದ ಪರಿಸ್ಥಿತಿ ಇದೆ ಎಂದು ತಿಳಿಸಿದರು.
ಒಂದು ಕಾಲದಲ್ಲಿ ಮಾಧ್ಯಮ ಉದ್ಯಮವಾಗಿ ಬೆಳೆಯುತ್ತಿವೆ ಎಂದು ಆರೋಪಿಸುತ್ತಿದ್ದೆವು. ಆದರೆ, ಇಂದು ಮಾಧ್ಯಮಗಳು ರಾಜಕಾರಣವೂ ಆಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ನ್ಯಾಯಮೂರ್ತಿ ನಾಗಮೋಹನ್‍ದಾಸ್, ಚಿಂತಕಿ ಡಾ.ವಸುಂದರಾ ಭೂಪತಿ, ಹಿರಿಯ ಪತ್ರಕರ್ತೆ ಡಾ.ವಿಜಯಮ್ಮ ಉಪಸ್ಥಿತರಿದ್ದರು.
‘ಬಹುತೇಕ ಮಾಧ್ಯಮಗಳು ಕಾರ್ಪೊರೇಟ್ ಶಕ್ತಿಗಳ ಹಾಗೂ ಆಡಳಿತ ವರ್ಗಗಳ ಪರವಾಗಿ ತುತ್ತೂರಿ ಊದುತ್ತಿವೆ. ಅವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದರೂ ಬಂಧಿಸುವ ಕಾಲ ಬಂದಿದೆ.’
ಪ್ರೊ. ಕೆ.ಮರುಳಸಿದ್ದಪ್ಪ, ಹಿರಿಯ ಸಾಹಿತಿ
‘ಮಾಧ್ಯಮಗಳು, ಮಠ ಮಾನ್ಯಗಳು ಇಂದು ಕಾರ್ಪೊರೇಟ್ ಶಕ್ತಿಗಳಿಗೆ ಹಾಗೂ ಆಡಳಿತ ನಡೆಸುತ್ತಿರುವ ಪಕ್ಷಗಳಿಗೆ ಮಾರಾಟವಾಗಿದೆ. ಅಕ್ಷರ ಕಲಿತ ಸಮೂಹ ಕೂಡ ಇಂದು ಕಾರ್ಪೊರೇಟ್ ಶಕ್ತಿಗಳ ವಿರುದ್ಧವಾಗಿ ಧ್ವನಿ ಎತ್ತುತ್ತಿಲ್ಲ.’
ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ
‘ಪತ್ರಕರ್ತರಿಗೆ ಸಂಬಳವನ್ನು ನೀಡಿ ತಮಗೆ ಬೇಕಾದಂತೆ ಸುದ್ದಿಯನ್ನು ಬರೆಸಿಕೊಳ್ಳುತ್ತಿರುವ ಮಾಲಕರ ವಿರುದ್ಧ ಮೊದಲು ಹೋರಾಟವನ್ನು ನಡೆಸಬೇಕಾಗಿದೆ. ಸಾಹಿತಿ ಹಂ.ಪ. ನಾಗರಾಜಯ್ಯ ಅವರನ್ನು ಬಂಧಿಸಿದ್ದು ನನಗೆ ಬಹಳ ಬೇಸರ ತರಿಸಿದೆ.’
ಡಾ.ವಿಜಯಮ್ಮ, ಹಿರಿಯ ಪತ್ರಕರ್ತೆ







