“ಟಿಆರ್‌ಪಿ ತಿರುಚುವಿಕೆಯ ಸರಳ ಪ್ರಕರಣವಲ್ಲ,ಇವರಿಗೆ ಜಾಮೀನು ನೀಡಿದರೆ ಸಾಕ್ಷಿಗಳನ್ನೂ ತಿರುಚಬಹುದು”
ಬಾರ್ಕ್ ಮುಖ್ಯಸ್ಥ ಪಾರ್ಥೊ ದಾಸಗುಪ್ತಾ ಕುರಿತು ಮುಂಬೈ ನ್ಯಾಯಾಲಯ ಹೇಳಿಕೆ

ಮುಂಬೈ,ಫೆ.3: ಬ್ರಾಡ್‌ಕಾಸ್ಟ್ ಆಡಿಯನ್ಸ್ ರೀಸರ್ಚ್ ಕೌನ್ಸಿಲ್ (ಬಾರ್ಕ್)ನ ಮಾಜಿ ಮುಖ್ಯಸ್ಥ ಪಾರ್ಥೊ ದಾಸಗುಪ್ತಾ ಅವರು ಟಿಆರ್‌ಪಿ ತಿರುಚುವಿಕೆ ಹಗರಣದ ರೂವಾರಿಯಾಗಿದ್ದಾರೆ ಎಂದು ಸ್ಥಳೀಯ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಅಭಿಪ್ರಾಯಿಸಿದೆ. ದಾಸಗುಪ್ತಾ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುವ ನ್ಯಾಯಾಲಯವು,ಈ ಹಂತದಲ್ಲಿ ಅವರನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಿದರೆ ಅವರು ಸಾಕ್ಷಾಧಾರಗಳನ್ನು ತಿರುಚಬಹುದಾದ ಮತ್ತು ಪ್ರಾಸಿಕ್ಯೂಷನ್ ಪರ ಸಾಕ್ಷಿಗಳ ಮೇಲೆ ಪ್ರಭಾವ ಬೀರಬಹುದಾದ ಎಲ್ಲ ಸಾಧ್ಯತೆಗಳೂ ಇವೆ ಎಂದು ತನ್ನ ಆದೇಶದಲ್ಲಿ ಹೇಳಿದೆ.
ಮುಂಬೈ ಪೊಲೀಸರು ಕಳೆದ ವರ್ಷದ ಡಿ.24ರಂದು ದಾಸಗುಪ್ತಾರನ್ನು ಬಂಧಿಸಿದ್ದರು. ರಿಪಬ್ಲಿಕ್ ಟಿವಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿಯವರು ತನ್ನ ವಾಹಿನಿಯ ಟಿಆರ್‌ಪಿ ರೇಟಿಂಗ್ ಹೆಚ್ಚಿಸಿಕೊಳ್ಳಲು ದಾಸಗುಪ್ತಾಗೆ ಲಕ್ಷಾಂತರ ರೂ.ಗಳ ಲಂಚ ನೀಡಿದ್ದರು ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದರು.
ದಾಸಗುಪ್ತಾರ ಜಾಮೀನು ಅರ್ಜಿ ಜ.6 ಮತ್ತು ಜ.20ರಂದು ಹೀಗೆ ಎರಡು ಬಾರಿ ತಿರಸ್ಕತಗೊಂಡಿತ್ತು.
ನ್ಯಾಯಾಲಯದ ಜ.20ರ ಆದೇಶ ಮಂಗಳವಾರ ಮಾಧ್ಯಮಗಳಿಗೆ ಲಭ್ಯವಾಗಿದ್ದು,ದಾಸಗುಪ್ತಾರ ಫೋನ್‌ನಿಂದ ಲಭ್ಯವಾಗಿರುವ ವಾಟ್ಸ್‌ಆ್ಯಪ್ ಚಾಟ್‌ಗಳ ಬಗ್ಗೆ ವಿವರವಾದ ತನಿಖೆ ನಡೆಯವ ಅಗತ್ಯವಿದೆ. ಇದು ಟಿಆರ್‌ಪಿಯ ಸರಳ ತಿರುಚುವಿಕೆಯ ಪ್ರಕರಣವಲ್ಲ ಎಂದು ನ್ಯಾ.ಎಂ.ಎ.ಭೋಸಲೆ ಅವರು ಅದರಲ್ಲಿ ಹೇಳಿದ್ದಾರೆ.
ಟಿಆರ್‌ಪಿ ರೇಟಿಂಗ್ ಬಗ್ಗೆ ಕೆಲ ಚರ್ಚೆಗಳು ನಡೆದಿವೆ ಮತ್ತು ಬಾರ್ಕ್‌ನ ಮುಖ್ಯಸ್ಥರಾಗಿದ್ದ ಆರೋಪಿಯು ತನಿಖಾಧಿಕಾರಿಗಳಿಗೆ ವಾಟ್ಸ್‌ಆ್ಯಪ್ ಸಂಭಾಷಣೆಗಳ ಬಗ್ಗೆ ಸರಿಯಾಗಿ ವಿವರಿಸಲು ಸೂಕ್ತ ವ್ಯಕ್ತಿಯಾಗಿದ್ದಾರೆ ಎಂದು ನ್ಯಾಯಾಲಯವು ಪ್ರಕರಣದ ವಾಸ್ತವಾಂಶಗಳು ಮತ್ತು ಸಂದರ್ಭಗಳನ್ನು ಹಾಗೂ ಗೋಸ್ವಾಮಿ ಮತ್ತು ದಾಸಗುಪ್ತಾ ನಡುವಿನ ವಾಟ್ಸ್‌ಆ್ಯಪ್ ಚಾಟ್‌ಗಳ ಆಧಾರದಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ವಿಚಾರಣೆ ಸಂದರ್ಭದಲ್ಲಿ ದಾಸಗುಪ್ತಾ ಪರ ವಕೀಲ ಶಾರ್ದೂಲ ಸಿಂಗ್ ಅವರು,ಪ್ರಕರಣದಲ್ಲಿಯ ಇತರ ಆರೋಪಿಗಳನ್ನು ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ,ಹೀಗಾಗಿ ತನ್ನ ಕಕ್ಷಿದಾರನನ್ನೂ ಬಿಡುಗಡೆಗೊಳಿಸಬೇಕು ಎಂದು ವಾದಿಸಿದ್ದರು. ದಾಸಗುಪ್ತಾ ಅವರ ಆರೋಗ್ಯವು ಶಿಥಿಲಗೊಂಡಿದೆ ಮತ್ತು ಜೈಲಿನಲ್ಲಿಯೇ ಇದ್ದರೆ ಅದು ಇನ್ನಷ್ಟು ಹದಗೆಟ್ಟರೆ ಅವರು ಮಧುಮೇಹ ಕೋಮಾಕ್ಕೆ ಜಾರಬಹುದು ಎಂದೂ ಸಿಂಗ್ ನಿವೇದಿಸಿಕೊಂಡಿದ್ದರು.
ಸಿಂಗ್ ವಾದವನ್ನು ತಳ್ಳಿಹಾಕಿದ್ದ ನ್ಯಾ.ಭೋಸಲೆ,14 ಆರೋಪಿಗಳು ಜಾಮೀನಿನಲ್ಲಿ ಬಿಡುಗಡೆಗೊಂಡಿರುವುದು ನಿಜ. ಆದರ ಹಾಲಿ ಅಪರಾಧ ಪ್ರಕರಣದ ದಾಖಲೆಗಳು ದಾಸಗುಪ್ತಾ ಅವರು ಇಡೀ ಅಪರಾಧದ ರೂವಾರಿಯಾಗಿದ್ದರು ಎನ್ನುವುದನ್ನು ತೋರಿಸುತ್ತಿವೆ ಎಂದು ಹೇಳಿದ್ದರು.
ನವಿ ಮುಂಬೈನ ತಲೋಜಾ ಜೈಲಿನಲ್ಲಿರುವ ದಾಸಗುಪ್ತಾ ಈಗ ಜಾಮೀನು ಕೋರಿ ಬಾಂಬೆ ಉಚ್ಚ ನ್ಯಾಯಾಲಯಕ್ಕೆ ಅರ್ಜಿಯನ್ನು ಸಲ್ಲಿಸಿದ್ದಾರೆ.







