ಶೃಂಗೇರಿ ಅತ್ಯಾಚಾರ ಪ್ರಕರಣ: ಸೂಕ್ತ ತನಿಖೆಗೆ ಕ್ಯಾಂಪಸ್ ಫ್ರಂಟ್ ಮನವಿ

ಚಿಕ್ಕಮಗಳೂರು, ಫೆ.3: ಜಿಲ್ಲೆಯ ಶೃಂಗೇರಿ ತಾಲೂಕಿನ ಗೋಚುವಳ್ಳಿ ಗ್ರಾಮದಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣವು ನಾಗರಿಕ ಸಮಾಜವನ್ನು ತಲೆ ತಗ್ಗಿಸುವಂತೆ ಮಾಡಿದ್ದು, ಈ ಅಮಾನವೀಯ ಘಟನೆಗೆ ಸಂಬಂಧಿಸಿದ ಆರೋಪಿಗಳನ್ನು ಪೊಲೀಸರು ಕೂಡಲೇ ಬಂಧಿಸಿ ಕಠಿಣ ಶಿಕ್ಷಗೆ ಗುರಿಪಸಡಿವಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಮುಖಂಡರು ಎಎಸ್ಪಿ ಶೃತಿ ಅವರಿಗೆ ಮನವಿ ಸಲ್ಲಿಸಿದ್ದಾರೆ
ಶೃಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ 17 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದೆ. ಅದರಲ್ಲಿ ಕೇವಲ 8 ಮಂದಿಯ ಬಂಧನವಾಗಿದೆ. ಉಳಿದ ಆರೋಪಿಗಳ ಪತ್ತೆಗೆ ಪೊಲಿಸರು ಇನ್ನೂ ಮೀನಾಮೇಷ ಎಣಿಸುತ್ತಿದ್ದಾರೆ. ಆರೋಪಿಗಳು ಪ್ರಭಾವಿಗಳ ಸಂಬಂಧಿಗಳೆಂಬ ಕಾರಣಕ್ಕೆ ಇಲಾಖೆ ಅವರ ಬಂಧನಕ್ಕೆ ಹಿಂದೇಟು ಹಾಕುತ್ತಿರುವ ಶಂಕೆ ಸಾರ್ವಜನಿಕ ವಲಯದಲ್ಲಿ ಮೂಡಿದೆ. ಪೊಲೀಸರು ಯಾವುದೇ ಒತ್ತಡಕ್ಕೆ ಮಣಿಯದೇ ಆರೋಪಿಗಳನ್ನು ಬಂಧಿಸುವ ಮೂಲಕ ನಾವು ಶೋಷಿತರು, ನೊಂದವರ ಪರ ಇದ್ದೇವೆ ಎಂಬ ನಂಬಿಕೆಯನ್ನು ಸಾರ್ವಜನಿಕರಲ್ಲಿ ಬಿತ್ತಬೇಕಿದೆ ಎಂದು ಮುಖಂಡರು ಮನವಿಯಲ್ಲಿ ತಿಳಿಸಿದ್ದಾರೆ.
ಘಟನೆಯ ಪ್ರಮುಖ ಆರೋಪಿಗಳೆಲ್ಲರೂ ಸಂಘಪರಿವಾರದಲ್ಲಿ ಗುರುತಿಸಿಕೊಂಡಿದ್ದಾರೆ. ಈ ಘಟನೆ ಸಂಘದವರ ಸಂಸ್ಕೃತಿಯನ್ನು ಅನಾವರಣಗೊಳಿಸುತ್ತಿದೆ. ಮಾತೆತ್ತಿದರೆ ಹಿಂದು ಹೆಣ್ಣುಮಕ್ಕಳ ರಕ್ಷಣೆಯ ಬಗ್ಗೆ ಮಾತನಾಡುವ ಸಂಘಪರಿವಾದ ನಾಯಕರು ಮತ್ತು ಚಿಕ್ಕಮಗಳೂರಿನ ಸಂಸದೆ ಶೋಭಾ, ಶಾಸಕರ ಸಿಟಿ ರವಿ ಅವರು ಈ ಪ್ರಕರಣದ ವಿರುದ್ಧ ಕಿಂಚಿತ್ತೂ ಪ್ರತಿಕ್ರಿಯಿಸದೇ ಇರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಬಿಜೆಪಿ ಮುಖಂಡರು ಆರೋಪಿಗಳ ರಕ್ಷಣೆಗೆ ಮುಂದಾಗಿರುವುದು ದೃಢಪಡುತ್ತಿದೆ ಎಂದು ಮುಖಂಡರು ಮನವಿಯಲ್ಲಿ ಆರೋಪಿಸಿದ್ದಾರೆ.
ಪೊಲೀಸರು ಇನ್ನಾದರೂ ಪ್ರಕರಣದ ಗಾಂಭೀರ್ಯತೆಯನ್ನು ಅರಿತು ಇನ್ನುಳಿದ ಪ್ರಮುಖ ಆರೋಪಿಗಳನ್ನು ಪತ್ತೆಹಚ್ಚಿ ಕಾನೂನಿನ ಮುಂದೆ ಒಪ್ಪಿಸಬೇಕು. ಅಲ್ಲದೇ ಸಂತ್ರಸ್ತೆಯ ಕುಟುಂಬಕ್ಕೆ ಸೂಕ್ತ ಪರಿಹಾರ ಮತ್ತು ಭದ್ರತೆಯನ್ನು ಒದಗಿಸಬೇಕು ಎಂದು ಕ್ಯಾಂಪಸ್ ಫ್ರಂಟ್ ಪೊಲೀಸ್ ಇಲಾಖೆಯನ್ನು ಮನವಿ ಮೂಲಕ ಆಗ್ರಹಿಸಿದೆ.
ಈ ವೇಳೆ ಜಿಲ್ಲಾಧ್ಯಕ್ಷ ಸವೂದ್ ಆಲಮ್, ಕಾರ್ಯದರ್ಶಿ ರಸೂಲ್, ಉಪಾಧ್ಯಕ್ಷ ಹಷಾಮ್, ಕೋಶಾಧಿಕಾರಿ ಫರ್ಹಾನ್, ಸದಸ್ಯರಾದ ಮಕ್ಸೂದ್ ಉಪಸ್ಥಿತರಿದ್ದರು.







