ತೇಗೂರು: ಜಾತಿ ಪ.ಪತ್ರ ಸಲ್ಲಿಸದ್ದಕ್ಕೆ ಕೈ ತಪ್ಪಿದ ಗ್ರಾಪಂ ಉಪಾಧ್ಯಕ್ಷ ಸ್ಥಾನ

ಚಿಕ್ಕಮಗಳೂರು ಫೆ.3: ಜಾತಿ ಪ್ರಮಾಣ ಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವ ಅವಕಾಶವನ್ನು ಅಭ್ಯರ್ಥಿಯೋರ್ವರು ಕಳೆದುಕೊಂಡ ಘಟನೆ ತಾಲೂಕಿನ ತೇಗೂರು ಗ್ರಾಮ ಪಂಚಾಯತ್‍ನಲ್ಲಿ ನಡೆದಿದೆ.
ಬಿಜೆಪಿ ಬೆಂಬಲಿತ 13 ಸದಸ್ಯರಿದ್ದರೂ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಅಭ್ಯರ್ಥಿ ಪಾಲಾಗಿದೆ. 16 ಸದಸ್ಯ ಬಲದ ತೇಗೂರು ಗ್ರಾಮ ಪಂಚಾಯತ್ನಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 13 ಅಭ್ಯರ್ಥಿಗಳು ಗೆದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗಳೆರಡೂ ಅನಾಯಾಸವಾಗಿ ಬಿಜೆಪಿ ಪಾಲಾಗಬೇಕಿತ್ತು. ಮಂಗಳವಾರ ಉಪಾಧ್ಯಕ್ಷ ಗಾದಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಜಯಶ್ರೀ ಹಾಗೂ ಕಾಂಗ್ರೆಸ್ ಬೆಂಬಲಿತ ಬೇಬಿ ಜಾನ್ ನಾಮಪತ್ರ ಸಲ್ಲಿಸಿದ್ದರು, ನಾಮಪತ್ರ ಪರಿಶೀಲಿಸಿದಾಗ ಜಯಶ್ರೀ ಅವರು ಜಾತಿ ಪ್ರಮಾಣ ಪತ್ರ ಸಲ್ಲಿಸಿರಲಿಲ್ಲ. ತರಾತುರಿಯಲ್ಲಿ ಒಂದೆರಡು ಗಂಟೆಯಲ್ಲೇ ಹೊಸದಾಗಿ ಜಾತಿ ಪ್ರಮಾಣ ಪತ್ರ ಮಾಡಿಸಿಕೊಂಡು ಬಂದು ಸಲ್ಲಿಸಿದರೂ ನಿಗದಿತ ಸಮಾಯಾವಕಾಶ ಮುಗಿದಿದ್ದರಿಂದ ಚುನಾವಣಾಧಿಕಾರಿ ಎಂ.ಎಸ್.ಸ್ವಪ್ನಿಲ್ ಅವರು ಕಾಂಗ್ರೆಸ್ ಬೆಂಬಲಿತ ಬೇಬಿಜಾನ್ ಅವಿರೋಧ ಆಯ್ಕೆಯಾಗಿರುವುದಾಗಿ ಘೋಷಿಸಿದರು.
ಚುನಾವಣೆ ನಂತರ ಬೇಬಿಜಾನ್ ಅವರನ್ನು ಅಭಿನಂದಿಸಲಾಯಿತು. ಗ್ರಾಮ ಪಂಚಾಯತ್ ಸದಸ್ಯರಾದ ವೇಣುಗೋಪಾಲರಾಜ್ ಅರಸ್, ಅನಂತಯ್ಯ ನಾವಡ, ಸಿ.ಎಂ.ದೇವರಾಜ್ ಅರಸ್, ಆದಿಲ್ ಹಾಜರಿದ್ದರು.