ರಂಗಭೂಮಿ ಕಲೆ ಉಳಿವಿಗೆ ಪೂರಕ ತರಬೇತಿ ಅತ್ಯಗತ್ಯ: ಜಿಪಂ ಉಪಾಧ್ಯಕ್ಷ ಸೋಮಶೇಖರ್

ಚಿಕ್ಕಮಗಳೂರು, ಫೆ.3: ಆಧುನಿಕತೆಯ ಇಂದಿನ ಸಿನಿಮಾಗಳಿಂದ ಕಳೆದು ಹೋಗುತ್ತಿರುವ ರಂಗಭೂಮಿಗೆ ಸಂಬಂಧಿಸಿದ ತರಬೇತಿಗಳು ಜಿಲ್ಲೆಯಲ್ಲಿ ನಡೆಯುತ್ತಿರುವುದು ಆಶಾದಾ ಯಕವಾಗಿದೆ ಎಂದು ಜಿ.ಪಂ.ಉಪಾಧ್ಯಕ್ಷ ಬಿ.ಜಿ.ಸೋಮಶೇಖರ್ ಹೇಳಿದರು.
ಬುಧವಾರ ನಗರದ ಬಸವ ಮಂದಿರಲ್ಲಿ ನಾಟಕ ಅಕಾಡೆಮಿ ಬೆಂಗಳೂರು, ಕಲಾಸಂಘ ಚಿಕ್ಕಮಗಳೂರು, ಬಸವತತ್ವ ಪೀಠದ ವತಿಯಿಂದ ಆಯೋಜಿಸಿದ್ದ ರಂಗ ಪ್ರಸಾದನ ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೋವಿಡ್-19 ಹಿನ್ನೆಲೆಯಲ್ಲಿ ಜನರು ಒಟ್ಟುಗೂಡಿ ಸಭೆ ಸಮಾರಂಭ ಶಿಬಿರಗಳನ್ನು ನಡೆಸದಿರಲು ಸರಕಾರ ನಿರ್ಬಂಧ ವಿಧಿಸಿತ್ತು. ಈಗ ಸೋಂಕಿಗೆ ಲಸಿಕೆ ಕಂಡು ಹಿಡಿದಿಡ್ದು ಮತ್ತೇ ಎಲ್ಲಾ ಕಾರ್ಯಕ್ರಮಗಳು ಮರುಚಾಲನೆ ಪಡೆದುಕೊಳ್ಳುತ್ತಿವೆ. ಅದರಂತೆ ನಾಟಕ ಅಕಾಡೆಮಿ ಜಿಲ್ಲೆಯಲ್ಲಿ ತರಬೇತಿ ಶಿಬಿರ ಆಯೋಜಿಸಿರುವುದು ಸಂತೋಷದ ಸಂಗತಿ ಎಂದರು.
ಹಿಂದೆ ಗುಬ್ಬಿ ವೀರಣ್ಣ ಅವರ ನಾಟಕ ಕಂಪನಿ ಹಳ್ಳಿಗಳಿಗೆ ಬಂದಿದೆ ಎಂದರೆ ಗ್ರಾಮೀಣ ಪ್ರದೇಶದ ಜನರು ಸಂಭ್ರಮಿಸುತ್ತಿದ್ದರು. ಗ್ರಾಮೀಣ ಪ್ರದೇಶದ ಕಲೆಗಳು ಮುಂದಿನ ದಿನ ಉಳಿಯಬೇಕಾದರೇ ಬೆಳೆಯಬೇಕಾದರೆ ಇಂತಹ ಶಿಬಿರಗಳು ಅತ್ಯವಶ್ಯಕವಾಗಿದೆ. ಶಿಬಿರಾರ್ಥಿಗಳು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಅಭಿಪ್ರಾಯಪಟ್ಟರು.
ಪಶುಸಂಗೋಪನೆ ಮೀನುಗಾರಿಕೆ ವಿವಿ ನಿರ್ದೇಶಕ ದೀಪಕ್ ದೊಡ್ಡಯ್ಯ ಮಾತನಾಡಿ, ನಾಟಕ ಅದರದ್ದೇ ಆದ ಇತಿಹಾಸವನ್ನು ಹೊಂದಿದೆ. ಹಿಂದೇ ನಾಟಕಗಳಲ್ಲಿ ಅಭಿನಯಿ ಸಿದವರು ಇಂದು ದೊಡ್ಡ ಚಿತ್ರನಟರಾಗಿ ಬೆಳೆದಿದ್ದಾರೆ ಎಂದರೆ ಅದಕ್ಕೆ ಕಾರಣ ರಂಗಭೂಮಿ. ಗುಬ್ಬಿ ವೀರಣ್ಣ ನಾಟಕ ಕಂಪನಿ ಈ ಸಮಾಜದ ಜನಜೀವನದ ವಿಷಯವಸ್ತುಗಳನ್ನು ಇಟ್ಟುಕೊಂಡು ನಾಟಕ ಪ್ರದರ್ಶನ ನೀಡುತ್ತಿದ್ದರು. ಪ್ರತಿಯೊಬ್ಬರಲ್ಲೂ ಪ್ರತಿಭೆ ಅಡಗಿರು ತ್ತದೆ. ಆ ಪ್ರತಿಭೆಯನ್ನು ಗುರುತಿಸಿ ಪೋಷಿಸಿದಾಗ ಉನ್ನತ ಸ್ಥಾನಮಾನ ಸಿಗಲಿದೆ ಎಂದು ತಿಳಿಸಿದರು.
ಜಿಲ್ಲಾ ಶರಣ ಸಾಹಿತ್ಯ ವೇದಿಕೆ ಅಧ್ಯಕ್ಷ ಸಂಚಾಲಕ ರವೀಶ್ ಕ್ಯಾತನಬೀಡು ಮಾತನಾಡಿ, ಇಂದು ಛಿದ್ರವಾಗಿರುವ ಮನಸ್ಸುಗಳನ್ನು ರಂಗಭೂಮಿ ಕಟ್ಟುವಂತಾಗಬೇಕು. ಹಾಗೂ ಬದುಕಿನ ಅನನ್ಯ ರೂಪಗಳನ್ನು ರಂಗಭೂಮಿ ಎಚ್ಚರಿಸುವ ಕೆಲಸ ಮಾಡ ಬೇಕು. ಇಂದು ನಮ್ಮ ಸಮಾಜವನ್ನು ಅನೇಕ ಅನಿಷ್ಟ ಪದ್ಧತಿಗಳು ತಾಂಡವಾಡುತ್ತಿದ್ದು, ರಂಗಭೂಮಿ ಇಂತಹ ವಿಷಯ ವಸ್ತುಗಳನ್ನು ವಿಷಯ ವಸ್ತುಗಳಾಗಿಟ್ಟುಕೊಂಡು ಸಮಾಜದ ಕಣ್ಣು ತೆರೆಸುವಂತಾಗಬೇಕು. ರಂಗಭೂಮಿ ಬದುಕನ್ನು ಪ್ರೀತಿಸುವುದನ್ನು ಕಲಿಸುತ್ತದೆ ಎಂದ ಅವರು, ರಂಗಭೂಮಿ ಸಮಾಜದ ಕೊಳಕುಗಳ ಗಟ್ಟಿಧ್ವನಿಯಲ್ಲಿ ಮಾತನಾಡಬೇಕು. ಆದರೆ, ಕಲಾವಿದರು ಅರ್ಜಿ ಹಿಡಿದು ಕಚೇರಿಗೆ ಅಲೆಯುವ ಪರಿಸ್ಥಿತಿ ಬಂದಿದೆ. ಇದು ಕೊನೆಗಾಣಬೇಕು ಎಂದರು.
ಸೋಮಶೇಖರ್ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಎಂ.ಎನ್.ಷಡಕ್ಷರಿ, ಜಿ.ಪಂ.ಸದಸ್ಯ ರವೀಂದ್ರ ಬೆಳವಾಡಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕುಂದೂರು ಅಶೋಕ್, ಕಸಪ ತಾಲ್ಲೂಕು ಅಧ್ಯಕ್ಷ ಹಿರೇಮಗಳೂರು ಪುಟ್ಟಸ್ವಾಮಿ, ರಂಗ ಕಲಾವಿದ ರಮೇಶ್ ಬಂಗೇರ, ರಂಗ ನಿರ್ದೇಶಕಿ ಬಿ.ಜಿ.ಪ್ರತಿಭಾ ಉಪಸ್ಥಿತರಿದ್ದರು. ಅರ್ಪಿತಾ ಕಳಸ ಪ್ರಾರ್ಥಿಸಿದರು. ಕಾಂತರಾಜ್ ನಿರೂಪಿಸಿದರು. ಸೌಮ್ಯಾ ಸ್ವಾಗತಿಸಿದರು.







