ಟ್ರ್ಯಾಕ್ಟರ್ ರ‍್ಯಾಲಿ ಕುರಿತು ನ್ಯಾಯಾಂಗ ತನಿಖೆ ಮಾಡಬೇಕೆಂದ ಅರ್ಜಿಯನ್ನು ತಳ್ಳಿಹಾಕಿದ ಸುಪ್ರೀಂ ಕೋರ್ಟ್
“ನಾವು ಪ್ರಧಾನಿ ಹೇಳಿಕೆಗೆ ಮಧ್ಯಪ್ರವೇಶಿಸುವುದಿಲ್ಲ”

ಹೊಸದಿಲ್ಲಿ, ಫೆ. 3: ಗಣರಾಜ್ಯೋತ್ಸವದ ದಿನ ನಡೆದ ರೈತರ ಟ್ರ್ಯಾಕ್ಟರ್ ರ‍್ಯಾಲಿ ಸಂದರ್ಭ ಸಂಭವಿಸಿದ ಹಿಂಸಾಚಾರದ ಕುರಿತು ಸಲ್ಲಿಸಲಾದ ಅರ್ಜಿಯನ್ನು ಈಗ ಆಲಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಬುಧವಾರ ಹೇಳಿದೆ.
ಈ ಹಿಂಸಾಚಾರದ ಕುರಿತು ಪೊಲೀಸರು ತನಿಖೆ ನಡೆಸುತ್ತಿರುವುದರಿಂದ ಅರ್ಜಿಯ ಆಲಿಕೆ ಸಾಧ್ಯವಿಲ್ಲ ಎಂದು ಅದು ಹೇಳಿದೆ.
ಸಿಂಘು, ಟಿಕ್ರಿ ಹಾಗೂ ಗಾಝಿಪುರ ಗಡಿಯಲ್ಲಿ ರೈತರು ತಡೆಬೇಲಿಗಳನ್ನು ಬೇಧಿಸಿ ಮುಂದುವರಿದ ಹಾಗೂ ಅನುಮತಿಸಲಾದ ಮಾರ್ಗದ ಬದಲು ಬೇರೆ ಮಾರ್ಗದಲ್ಲಿ ಸಾಗಿದ ಬಳಿಕ ಹೊಸದಿಲ್ಲಿಯ ವಿವಿಧ ಭಾಗಗಳಲ್ಲಿ ಸಂಭವಿಸಿದ ಹಿಂಸಾಚಾರದ ಕುರಿತು ನ್ಯಾಯಾಂಗ ತನಿಖೆ ನಡೆಸುವಂತೆ ದೂರುದಾರರು ಕೋರಿದ್ದರು.
ಮನವಿ ಹಿಂದೆಗೆದುಕೊಳ್ಳುವಂತೆ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ನೇತೃತ್ವದ ತ್ರಿಸದಸ್ಯರ ನ್ಯಾಯಪೀಠ ದೂರುದಾರರಿಗೆ ಸೂಚಿಸಿದೆ.
‘‘ನಾವು ಪ್ರಧಾನಿ ಅವರ ಹೇಳಿಕೆಯನ್ನು ಓದಿದ್ದೇವೆ. ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳಲಿದೆ; ಸರಕಾರ ಈ ಬಗ್ಗೆ ಪರಿಶೀಲಿಸಲಿದೆ ಎಂದು ಪ್ರಧಾನಿ ಅವರು ಹೇಳಿದ್ದಾರೆ. ಆದುದರಿಂದ ನಾವು ಮಧ್ಯಪ್ರವೇಶಿಸಲು ಬಯಸಲಾರೆವು’’ ಎಂದು ನ್ಯಾಯಪೀಠ ಹೇಳಿದೆ.
ಕೆಂಪು ಕೋಟೆಯಲ್ಲಿ ನಡೆದ ಘಟನೆಗಳ ಬಗ್ಗೆ ವಿಶೇಷ ತನಿಖೆ ನಡೆಸುವಂತೆ ಪ್ರತಿಪಕ್ಷಗಳ ಆಗ್ರಹದ ಬಗ್ಗೆ ಕಳೆದ ವಾರ ಪ್ರತಿಕ್ರಿಯಿಸಿದ್ದ ಪ್ರಧಾನಿ, ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳಲಿದೆ ಎಂದಿದ್ದರು.







