ಅನುದಾನ ಕಡಿತದ ವಿರುದ್ಧ ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

ಬೆಂಗಳೂರು, ಫೆ.3: ದೇಶದಲ್ಲಿ ಅಪೌಷ್ಠಿಕತೆ ಹೆಚ್ಚುತ್ತಿದ್ದರೂ ಸಮಗ್ರ ಶಿಶು ಅಭಿವದ್ಧಿ ಯೋಜನೆ (ಐಸಿಡಿಎಸ್)ಗೆ ಬಜೆಟ್‍ನಲ್ಲಿ ಅನುದಾನ ಕಡಿತಗೊಳಿಸಿರುವುದು ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಬುಧವಾರ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ನೇತತ್ವದಲ್ಲಿ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಜಮಾಯಿಸಿದ ಆಶಾ ಕಾರ್ಯಕರ್ತೆಯರು, ಅಂಗನವಾಡಿ ನೌಕರರಿಗೆ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಐಸಿಡಿಎಸ್ ಯೋಜನೆಯನ್ನು ಬಲಿಷ್ಠಗೊಳಿಸಬೇಕು. ದೇಶದಲ್ಲಿ ಅಪೌಷ್ಠಿಕತೆ ನಿವಾರಣೆಗೆ ಯೋಜನೆಗಳನ್ನು ಘೋಷಿಸಬೇಕು. ಕೊರೋನ ಸಂಕಷ್ಟದ ಕಾಲದಲ್ಲಿ ದುಡಿದವರಿಗೆ ವೇತನ ಹೆಚ್ಚಿಸಬೇಕು ಒಕ್ಕೊರಲಿನಿಂದ ಒತ್ತಾಯ ಮಾಡಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಂಘದ ಅಧ್ಯಕ್ಷೆ ಎಸ್.ವರಲಕ್ಷ್ಮಿ, ಕೇಂದ್ರ ಸರಕಾರ, ಮಕ್ಕಳ ಸಮಗ್ರ ಅಭಿವದ್ಧಿಗಾಗಿ ಇರುವ ಯೋಜನೆಗಳನ್ನೂ ದುರ್ಬಲಗೊಳಿಸುತ್ತಿದೆ. ಒಂದು ವರ್ಷದಲ್ಲಿ ಯಾವ ಯೋಜನೆಯನ್ನು ಅನುಷ್ಠಾನಗೊಳಿಸಲು ಸಾಧ್ಯ? ವರ್ಷಕ್ಕೊಂದು ಹೊಸ ಯೋಜನೆಯನ್ನು ಘೋಷಿಸುವ ಸರಕಾರ ಅದನ್ನು ಕಾರ್ಯಗತಗೊಳಿಸಲು ಗಮನ ಹರಿಸುವುದಿಲ್ಲ. ಈಗಾಗಲೇ ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಯೂ ಹಿನ್ನೆಲೆಗೆ ಸರಿದಿದೆ. ಹೀಗಾದರೆ ದೇಶದ ಮಕ್ಕಳ ಭವಿಷ್ಯ ಏನಾಗಬೇಕು ಎಂದು ಪ್ರಶ್ನಿಸಿದರು.
2020-21ರ ಬಜೆಟ್‍ನಲ್ಲಿ ಐಸಿಡಿಎಸ್‍ಗೆ 28,557.38 ಕೋಟಿಯನ್ನು ಮೀಸಲಿಟ್ಟ ಕೇಂದ್ರ ಸರಕಾರ, 2021-22ರಲ್ಲಿ ಅಂಗನವಾಡಿ ಸಾಕ್ಷಮ್ ಮತ್ತು ಪೋಷಣ್ 2.0 ಎಂದು ಬದಲಾಯಿಸಿದೆ. ಇದಕ್ಕಾಗಿ 20,105 ಕೋಟಿ ರೂ. ಅನುದಾನ ಮೀಸಲಿಟ್ಟಿದೆ. ಸುಮಾರು 8452.38 ಕೋಟಿ ರೂ. ಕಡಿತಗೊಳಿಸಿದೆ. ಬಡತನ ಹಾಗೂ ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆಗೆ ಬಜೆಟ್‍ನಲ್ಲಿ ಯಾವ ರೀತಿಯ ಕ್ರಮಕೈಗೊಳ್ಳಲಾಗಿದೆ? ಐಸಿಡಿಎಸ್ ಹಾಗೂ ಬಿಸಿಯೂಟ ಯೋಜನೆಯಡಿ 18 ಕೋಟಿಗೂ ಹೆಚ್ಚು ಮಕ್ಕಳಿದ್ದಾರೆ. ವಿವಿಧ ಯೋಜನೆಗಳಿಗೆ ಅನುದಾನ ಕಡಿತಗೊಳಿಸಿದರೆ ಮಕ್ಕಳಲ್ಲಿನ ಸಮಗ್ರ ಕಲ್ಯಾಣ ಹೇಗೆ ಸಾಧ್ಯ ಎಂದರು.
2014-19ರ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ ದೇಶದಲ್ಲಿ ಅಪೌಷ್ಠಿಕತೆ ಹೆಚ್ಚಳವಾಗಿರುವ ಬಗ್ಗೆ ಗಮನ ಸೆಳೆದಿದೆ. ದೇಶದಲ್ಲಿ ಬಡತನ, ಹಸಿವು ಮತ್ತು ಅಪೌಷ್ಠಿಕತೆಯಿಂದ 5 ವರ್ಷದೊಳಗಿನ 3 ಲಕ್ಷ ಮಕ್ಕಳು ಸಾವನ್ನಪ್ಪುವ ಮುನ್ಸೂಚನೆಯನ್ನು ಯೂನಿಸೆಫ್ ಕೇಂದ್ರ ಸರಕಾರಕ್ಕೆ ನೀಡಿದೆ. ಭಾರತದ 8.8 ಕೋಟಿ ಮಕ್ಕಳು ಅಪೌಷ್ಠಿಕತೆಯಿಂದ ದುರ್ಬಲರಾಗುತ್ತಿದ್ದಾರೆ. ಆದರೆ, ಆತ್ಮನಿರ್ಭರ ಭಾರತ ಮತ್ತು ಟ್ರಿಲಿಯನ್ ಆರ್ಥಿಕತೆ ಬಗ್ಗೆ ಮಾತನಾಡುವ ಸರಕಾರ, 2020-21ರ ಬಜೆಟ್‍ನಲ್ಲಿ ಬಿಸಿಯೂಟ ಯೋಜನೆ ಅನುದಾನದಲ್ಲಿ 1400 ಕೋಟಿ ರೂ. ಕಡಿತಗೊಳಿಸಿ ಈ ಯೋಜನೆಯನ್ನೇ ಹಂತ ಹಂತವಾಗಿ ಬಲಹೀನಗೊಳಿಸಲು ಹೊರಟಿದೆ ಎಂದು ಅವರು ದೂರಿದರು.
.jpg)







