ಸಾಮಾಜಿಕ ಸ್ಥಿತಿಗತಿ ಅಧ್ಯಯನ ನಡೆಸಿ ಸರಕಾರಕ್ಕೆ ವರದಿ : ಜಯಪ್ರಕಾಶ್ ಹೆಗ್ಡೆ

ಕಾರ್ಕಳ : ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಸಾಮಾಜಿಕ ಸ್ಥಿತಿಗತಿಗಳನ್ನು ಸಮೀಕ್ಷೆ ನಡೆಸಿ ಸಮಗ್ರ ವರದಿ ಯನ್ನು ಸರಕಾರದ ಮುಂದೆ ಇರಿಸುವುದು ಆಯೋಗದ ಉದ್ದೇಶವಾಗಿರುತ್ತದೆ. ರಾಜ್ಯದ ವಿವಿಧ ಭಾಗಗಳಿಗೆ ಪ್ರವಾಸ ನಡೆಸಿ, ಅಧ್ಯಯನ ನಡೆಸಿ ಸಮಗ್ರ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು ಎಂದು ರಾಜ್ಯ ಹಿಂದುಳಿದ ವರ್ಗಗಳ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಏರ್ಪಡಿಸಲಾಗಿದ್ದ ಸಮ್ಮಾನ-ಸಂವಾದ-ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಸಮ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಹಿಂದುಳಿದ ವರ್ಗಗಳ ಆಯೋಗವು ರಾಜಕೀಯೇತರ ಸಂಸ್ಥೆಯಾಗಿದೆ. ಆಯೋಗಕ್ಕೆ ತನ್ನದೇ ಆದ ಕಾನೂನು, ಚೌಕಟ್ಟುಗಳು ಇವೆ. ಹಿಂದುಳಿದ ವರ್ಗಗಳ ಸಾಮಾಜಿಕ ಸ್ಥಿತಿಗತಿಯ ಕುರಿತು ಅಧ್ಯಯನ ನಡೆಸಲಾಗುತ್ತಿದೆ ಎಂದರು.
ಜಾತಿ ಪ್ರಮಾಣ ಪತ್ರ ನೀಡುವಲ್ಲಿ ತಾಂತ್ರಿಕ ತೊಂದರೆಗಳಿವೆ. ರಾಜ್ಯದಲ್ಲಿ 207 ಜಾತಿಗಳು ಹಾಗೂ 877 ಉಪಜಾತಿಗಳಿವೆ. ಜಾತಿಗಳಲ್ಲಿ ಉಪ ಜಾತಿಗಳು ಬಾಕಿಯಾಗಿ ಬೇರೆ ಪಟ್ಟಿಯಲ್ಲಿ ಹಂಚಿ ಹೋಗಿ ಸಮಸ್ಯೆಗಳಾಗಿವೆ. ಅವುಗಳನ್ನು ಒಂದೇ ಪಟ್ಟಿಗೆ ಸೇರ್ಪಡೆಗೊಳಿಸಿ, ಸಮಸ್ಯೆ ಗಳನ್ನು ಸರಿಪಡಿಸುವ ಕೆಲಸವಾಗಬೇಕಿದೆ ಎಂದರು.
ಜಾತಿ ಸಮುದಾಯಗಳ ಪೈಕಿ ಆರ್ಹರಿಗೆ ಜಾತಿ ಪ್ರಮಾಣ ಪತ್ರ ಸಿಗದೆ ಹೋದಾಗ ಅವರ ಕುಟುಂಬಕ್ಕೆ ಅನಾಯವಾಗುತ್ತದೆ. ಒಂದು ಕುಟುಂಬದ ಒಂದು ಮಗುವಿಗೆ ಒಳ್ಳೆ ಶಿಕ್ಷಣ ಸಿಕ್ಕಿದಾಗ, ಇಡೀ ಕುಟುಂಬ ಮೇಲೆ ಬರುತ್ತದೆ. ಅವರು ಶಾಶ್ವತವಾಗಿಯೇ ಹಾಗೆಯೇ ಹಿಂದಿನಂತೆ ಉಳಿಯುವುದಲ್ಲ. ಬದಲಾವಣೆಗಳು ಆಗಬೇಕು ಎಂದರು.
ಜಾತಿ ಪ್ರಮಾಣ ಪತ್ರ ಹಾಗೂ ಜಾತಿಗಳ ಪಟ್ಟಿ ಸೇರಿಸುವ ವಿಚಾರದಲ್ಲಿ, ವಲಸೆ ಕಾರ್ಮಿಕರಿಗೆ ಸರ್ಟಿಪಿಕೆಟ್ ನೀಡುವ ವಿಚಾರದಲ್ಲಿ, ವರದಿ ಸಲ್ಲಿಕೆ ಸಂದರ್ಭದಲ್ಲೆಲ್ಲ ಅಧಿಕಾರಿಗಳು ಸಾಕಷ್ಟು ಅಧ್ಯಯನ ನಡೆಸಬೇಕು. ಪ್ರಕರಣಗಳ ಕುರಿತು ಪೂರ್ಣ ಪ್ರಮಾಣ ಅಧ್ಯಯನ ಆಗಬೇಕು. ಹಿಂದುಳಿದ ವರ್ಗ, ಪರಿಶಿಷ್ಟ ಜಾತಿಗೆ ಸೇರುದವರೇ ಎಂಬಿತ್ಯಾದಿ ವಿಚಾರಗಳ ಕುರಿತು ಸಮಗ್ರವಾಗಿ ಪರಿಶೀಲಿಸಬೇಕು. ಬಳಿಕವೇ ಸರಕಾರಕ್ಕೆ ವರದಿ ಸಲ್ಲಿಸಬೇಕು ಎಂದರು.
ಅರಣ್ಯ ಪ್ರದೇಶದಲ್ಲಿ ಕುಳಿತವರು ಮತ್ತು ಡೀಮ್ಡ್ ಫಾರೆಸ್ಟ್ ನಲ್ಲಿ ವಾಸ ಮಾಡುವ ಸಮುದಾಯದ ಜಾತಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿ ತಾಂತ್ರಿಕ ತೊಂದರೆಗಳಿವೆ. 1971 ರ ನಂತರ ಡೀಮ್ಡ್ ಫಾರೆಸ್ಟ್ ಎಂದಾಗಿದೆ. ರೆವೆನ್ಯೂ, ಫಾರೆಸ್ ಜಂಟಿ ಸರ್ವೆ ನಡೆಸಬೇಕಿದೆ ಎಂದು ಅಭಿಪ್ರಾಯು ಪಟ್ಟರು. ಬೋವಿ ಜನಾಂಗ ಪರಿಶಿಷ್ಟ ಜಾತಿ ಅಂತ ಇದೆ. ಜಾತಿ ಪ್ರಮಾಣ ಪತ್ರದಲ್ಲಿ ಪರಿಶಿಷ್ಟ ಜಾತಿ ಎಂದು ಕೊಡುತಿಲ್ಲ. ಅಧಿಕಾರಿಗಳಲ್ಲಿ ಕೂಡ ಗೊಂದಲವಿದೆ ಎಂದರು.
ಕಾರ್ಯ ನಿರತ ಪತ್ರಕರ್ತ ಸಂಘದ ಉಡುಪಿ ಜಿಲ್ಲಾಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ತಹಶೀಲ್ದಾರ್ ಪುರಂದರ ಹೆಗ್ಡೆ, ಆಯೋಗದ ಸದಸ್ಯ ಕೆ.ಟಿ.ಸುವರ್ಣ, ಪೂರ್ಣಿಮ ಸಿಲ್ಕ್ಸ್ ನ ಪಾಲುದಾರ ರವಿಪ್ರಕಾಶ್ ಪ್ರಭು, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ದಯಾನಂದ, ಪತ್ರಕರ್ತರ ಸಂಘ ಅಧ್ಯಕ್ಷ ಜಗದೀಶ್ ಆರ್.ಬಿ ಉಪಸ್ಥಿತರಿದ್ದರು. ಮಹಮ್ಮದ್ ಶರೀಪ್ ಸ್ವಾಗತಿಸಿ, ವಂದಿಸಿದರು.
ಮೂವರಿಗೆ ಸಮ್ಮಾನ
ಪ್ರವಾಸಿ ಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು, ಉದ್ಯಮಿ ಪೂರ್ಣಿಮ ಸಿಲ್ಕ್ಸ್ನ ಪಾಲುದಾರ ರವಿಪ್ರಕಾಶ ಪ್ರಭು ಇವರನ್ನು ಪತ್ರಕರ್ತರ ಸಂಘದಿಂದ ಸಮ್ಮಾನಿಸಿ, ಗೌರವಿಸಲಾಯಿತು.
ಈ ಸಮ್ಮಾನ ದೊಡ್ಡ ಅನುಭವ
ಪತ್ರಕರ್ತರಿಂದ ಸಮ್ಮಾನ ಮಾಡಿಸಿಕೊಳ್ಳುವುದು ದೊಡ್ಡ ಅನುಭವ, ಸಮಸ್ಯೆಗಳಿಗೆ ಸ್ಪಂದಿಸಿ, ಸಮಾಜದ ಜತೆ ಗುರುತಿಸಿಕೊಳ್ಳುವ ಪತ್ರಕರ್ತರಿಂದ ಸಮ್ಮಾನ ಪಡೆದಿರುವುದು ಖುಷಿ ನೀಡಿದೆ ಎಂದು ಜಯಪ್ರಕಾಶ್ ಹೆಗ್ಡೆ ಹೇಳಿದರು.
50 ವರ್ಷಗಳ ಹಿಂದೆ ಭಾರತ ಕ್ರಿಕೆಟ್ ತಂಡದ ಅಧಿಕೃತ ಗ್ರಾಫರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಗೋಪಾಲಕೃಷ್ಣ ಭಟ್ ಕ್ರೀಡಾಂಗಣದಲ್ಲಿ ನಡೆದ ಅವಘಡವೊಂದರಲ್ಲಿ ತೀವ್ರತರದಲ್ಲಿ ಗಾಯಗೊಂಡಿದ್ದರು. ಅಂದಿನ ಆ ದಿನದಲ್ಲಿ ಪತ್ರಕರ್ತ ಪ್ರತಿನಿಧಿಗಳೆಲ್ಲ ಸೇರಿ ಅವರನ್ನು ಆಸ್ಪತ್ರೆಗೆ ಸೇರಿಸಿ ರೂ.10ಸಾವಿರ ಸಹಾಯ ನೀಡಿ ಚಿಕಿತ್ಸೆಗೆ ನೆರವಾಗಿದ್ದರು. ಮಾನವೀಯ ಹೃದಯವಂತಿಕೆ ಪತ್ರಕರ್ತರಲ್ಲಿಯೂ ಇದೆ ಗೋಪಾಲಕೃಷ್ಣ ಭಟ್ ಅವರು ನನ್ನ ಅಜ್ಜ ಆಗಿದ್ದರು ಎಂದು ಸಮ್ಮಾನ ಸ್ವೀಕರಿಸಿದ ಪೂರ್ಣಿಮ ಸಿಲ್ಕ್ಸ್ ನ ಪಾಲುದಾರ ರವಿಪ್ರಕಾಶ್ ಪ್ರಭು ನೆನಪಿಸಿಕೊಂಡರು.







