ಎಸ್ಟಿ ಪಂಗಡ ಸೇರ್ಪಡೆಗೆ ಪಟ್ಟು: ಪಾದಯಾತ್ರೆ ಸಮಾಪ್ತಿ, ಫೆ.7ಕ್ಕೆ ಬಹಿರಂಗ ಸಮಾವೇಶ
ಬೆಂಗಳೂರು, ಫೆ.3: ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿ ಕಾಗಿನೆಲೆ ಕನಕಗುರು ಪೀಠಾಧ್ಯಕ್ಷ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಅವರ ನೇತೃತ್ವದಲ್ಲಿ ಕಾಗಿನೆಲೆಯಿಂದ ಹಮ್ಮಿಕೊಂಡಿದ್ದ ಪಾದಯಾತ್ರೆ ಬುಧವಾರ ರಾಜಧಾನಿ ಬೆಂಗಳೂರಿಗೆ ತಲುಪಿ ಸಮಾಪ್ತಿಗೊಂಡಿದ್ದು, ಫೆ.7ರಂದು ಬೃಹತ್ ಬಹಿರಂಗ ಸಮಾವೇಶಕ್ಕೆ ಕರೆ ನೀಡಲಾಗಿದೆ.
ಜ.15ರಿಂದ ಕಾಗಿನೆಲೆಯಿಂದ ಹೊರಟ ಪಾದಯಾತ್ರೆ ಬ್ಯಾಡಗಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ಚಿತ್ರದುರ್ಗ, ಹಿರಿಯೂರು, ತುಮಕೂರು ಮೂಲಕ ಬೆಂಗಳೂರಿಗೆ ತಲುಪಿತು. ಆನಂತರ, ನಗರದ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಹೋರಾಟಗಾರರು ಮಾಲಾರ್ಪಣೆ ಮಾಡಿದ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, ತಮ್ಮ ಬೇಡಿಕೆಗಳನ್ನು ಮುಂದಿಟ್ಟರು.
ಇದಕ್ಕೆ ಮುಖ್ಯಮಂತ್ರಿಗಳು ಮೌಖಿಕವಾಗಿ ಬೇಡಿಕೆ ಈಡೇರಿಸುವ ಭರವಸೆ ನೀಡಿರುವ ಹಿನ್ನೆಲೆ ಪಾದಯಾತ್ರೆ ಸಮಾಪ್ತಿಗೊಂಡಿದೆ ಎಂದು ಕುರುಬ ಸಮುದಾಯದ ಮುಖಂಡರೊಬ್ಬರು ಮಾಹಿತಿ ನೀಡಿದರು.
ಪಾದಯಾತ್ರೆ ಸಂದರ್ಭದಲ್ಲಿ ಮಾತನಾಡಿದ ನಿರಂಜನಾನಂದಪುರಿ, ರಾಜ್ಯದಲ್ಲಿ ಸುಮಾರು 60 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಕುರುಬ ಸಮುದಾಯ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ತೀರಾ ಹಿಂದೆ ಉಳಿದಿದೆ.
ಕಟ್ಟಕಡೆಯ ಕುರುಬನಿಗೆ ಎಸ್ಟಿ ಮೀಸಲಾತಿ ದೊರೆಯುವಂತೆ ಈ ಹೋರಾಟದ ಮೂಲಕ ಕೇಂದ್ರ ಮತ್ತು ರಾಜ್ಯ ಸರಕಾರದ ಮೇಲೆ ಹಕ್ಕೊತ್ತಾಯ ಮಾಡಲಾಗುತ್ತಿದೆ. ಇದರಿಂದ ಸಮಾಜದ ಬಂಧುಗಳಂತೆ ಹಾಲುಮತ ಸಮುದಾಯವೂ ಮುಖ್ಯವಾಹಿನಿಗೆ ಬರಲಿದೆ ಎಂದರು.
ಕುರುಬ ಸಮುದಾಯ ಅತ್ಯಂತ ಹಿಂದುಳಿದ ಸಮುದಾಯವಾಗಿದ್ದು, ಎಸ್ಟಿಗೆ ಸೇರಿಸುವ ಮೂಲಕ ಸರಕಾರಿ ಸೌಲಭ್ಯಗಳಿಗಾಗಿ ಆಗ್ರಹಿಸಿದ್ದೇವೆ ಎಂದ ಅವರು, ಸಮುದಾಯ ಎಂದೋ ಎಸ್ಟಿಗೆ ಸೇರಬೇಕಿತ್ತು. ರಾಜಕೀಯ ನಾಯಕರ ಇಚ್ಛಾಶಕ್ತಿಯ ಕೊರತೆಯಿಂದ ವಂಚಿತವಾಗಿದೆ. ಈಗ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕೆಂದು ಒತ್ತಾಯಿಸಿ ಸುದೀರ್ಘ ಪಾದಯಾತ್ರೆ ಮಾಡಿ ಸರಕಾರಕ್ಕೆ ಮನವಿ ಸಲ್ಲಿಸಿದ್ದೇವೆ ಎಂದರು.
ಸರಕಾರ ಕೇಂದ್ರಕ್ಕೆ ಶಿಫಾರಸು ಮಾಡುವ ಮೂಲಕ ಸಮುದಾಯವನ್ನು ಎಸ್ಟಿ ಪಂಗಡಕ್ಕೆ ಸೇರಿಸಿ ಅನುಕೂಲ ಕಲ್ಪಿಸಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದು ಅವರು ಹೇಳಿದರು.
ಬೃಹತ್ ಸಮಾವೇಶ
20 ದಿನಗಳ ಕಾಲ 360 ಕಿ.ಮೀ. ಸುದೀರ್ಘ ಪಾದಯಾತ್ರೆಯಲ್ಲಿ ಸಾವಿರಾರು ಜನ ಪಾಲ್ಗೊಂಡಿದ್ದು, ಫೆ.7ರಂದು ಬೆಂಗಳೂರಿನ ಬಿಐಇಸಿ ಮೈದಾನದಲ್ಲಿ ಬೃಹತ್ ಬಹಿರಂಗ ಸಭೆಯಲ್ಲಿ 10 ಲಕ್ಷ ಸಮುದಾಯದ ಜನರು ಸೇರಲಿದ್ದೇವೆ. ಜತೆಗೆ ಸರಕಾರದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.







