ಕಾಂತರಾಜ್ ಆಯೋಗದ ಜನಗಣತಿ ವರದಿ ಸರಕಾರದ ಕೈ ಸೇರುತ್ತಿದ್ದಂತೆ ಪ್ರಕಟ: ಕೋಟಾ ಶ್ರೀನಿವಾಸ ಪೂಜಾರಿ

ಬೆಂಗಳೂರು, ಫೆ.3: ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ರಚಿಸಲಾಗಿದ್ದ ಕಾಂತರಾಜ್ ಆಯೋಗ ಸಿದ್ಧಪಡಿಸಿರುವ ಸಾಮಾಜಿಕ ಹಾಗೂ ಶೈಕ್ಷಣಿಕ ವರದಿ ರಾಜ್ಯ ಸರಕಾರದ ಕೈ ಸೇರುತ್ತಿದ್ದಂತೆ ಪ್ರಕಟಿಸಲಾಗುತ್ತದೆ ಎಂದು ವಿಧಾನ ಪರಿಷತ್ ಸಭಾ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಭರವಸೆ ನೀಡಿದ್ದಾರೆ.
ಬುಧವಾರ ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ನಂಜುಂಡಿ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಹಿಂದುಳಿದ ವರ್ಗದ ಆಯೋಗದಿಂದ ಸಮೀಕ್ಷೆ ನಡೆಸಲಾಗಿತ್ತು. ವರದಿಗಾಗಿ 162 ಕೋಟಿ ರೂ.ವೆಚ್ಚವಾಗಿದೆ. ಈಗಲೂ ವರದಿ ಸರಕಾರಕ್ಕೆ ಬಂದಿಲ್ಲ. ಹೀಗಾಗಿ ಜನಗಣತಿ ವರದಿ ಪ್ರಕಟಿಸುವ ಸಂಬಂಧ ಸದ್ಯದಲ್ಲೇ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ವೇಳೆ ಮಧ್ಯಪ್ರವೇಶ ಮಾಡಿದ ಸದಸ್ಯ ಎಚ್.ವಿಶ್ವನಾಥ್, 1,383 ಜಾತಿಗಳ ಸಮೀಕ್ಷೆ ನಡೆಸಿದ್ದ ಕಾಂತರಾಜು ಆಯೋಗದ ವರದಿ ಸಿದ್ಧವಾಗಿದ್ದರೂ ಯಾಕೆ ಬಿಡುಗಡೆ ಮಾಡಿಲ್ಲ. ವರದಿ ಸಿದ್ಧಪಡಿಸಲು ಸೂಚಿಸಿದ್ದ ಸರಕಾರ ಯಾಕೆ ವರದಿ ಬಹಿರಂಗ ಮಾಡುವ ಧೈರ್ಯ ಮಾಡಲಿಲ್ಲ. ನಂತರ ಬಂದ ಮೈತ್ರಿ ಸರಕಾರ ಯಾಕೆ ವರದಿ ಮಂಡಿಸಲಿಲ್ಲ. ಈಗಿನ ಸರಕಾರ ಕೂಡ ಯಾಕೆ ವಿಳಂಬ ಮಾಡುತ್ತಿದೆ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಕಾಂತರಾಜ್ ಆಯೋಗದ ಸಮೀಕ್ಷೆ, ಅಂಕಿ-ಅಂಶ ಗಣಕೀಕೃತಗೊಂಡಿದೆ. ಎಲ್ಲಾ ದಾಖಲೆ ಸಿದ್ಧವಿದೆ. ಆದರೆ ಸರಕಾರಕ್ಕೆ ಹಸ್ತಾಂತರವಾಗುವುದು ಮಾತ್ರ ಬಾಕಿ ಇದೆ. ವರದಿ ಬಿಡುಗಡೆ ವಿಚಾರ ಸಂಬಂಧ ನಮ್ಮಲ್ಲಿ ಯಾವ ಗೊಂದಲವೂ ಇಲ್ಲ. ಆದಷ್ಟು ಬೇಗ ವರದಿ ಪ್ರಕಟಿಸಲು ಪ್ರಯತ್ನಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.
ಇದಕ್ಕೂ ಮುನ್ನ ಮಾತನಾಡಿದ ನಂಜುಂಡಿ, ವಿಶ್ವಕರ್ಮ ಜನಾಂಗದ ಜನಸಂಖ್ಯೆ ಎಷ್ಟು, ಅದರಲ್ಲಿ ಪುರುಷರು ಎಷ್ಟು, ಮಹಿಳೆಯರು ಎಷ್ಟು, ಉದ್ಯೋಗಿಗಳು ಎಷ್ಟು ಎಂಬುದರ ಬಗ್ಗೆ ಸಮೀಕ್ಷೆ ನಡೆಸಿರುವ ಕಾಂತರಾಜು ಆಯೋಗದ ವರದಿ ಯಾವಾಗ ಬಿಡುಗಡೆ ಮಾಡುತ್ತೀರಿ ಎಂದು ಸರಕಾರವನ್ನು ಪ್ರಶ್ನಿಸಿದರು.







