ಬಂಟ್ವಾಳ : ತಿರುವು ಪಡೆದ ವೃದ್ಧೆಯ ಅಸಹಜ ಸಾವು ಪ್ರಕರಣ; ಮೂವರು ಸೆರೆ

ಬಂಟ್ವಾಳ : ತಾಲೂಕಿನ ಅಮ್ಮುಂಜೆ ಗ್ರಾಮದಲ್ಲಿ 8 ದಿನಗಳ ಹಿಂದೆ 72 ರ ಹರೆಯದ ವೃದ್ಧೆಯೋರ್ವರ ಅಸಹಜ ಸಾವು ಇದೀಗ ಕೊಲೆ, ದರೋಡೆ ಪ್ರಕರಣವಾಗಿ ತಿರುವು ಪಡೆದುಕೊಂಡಿದೆ. ಈ ಕೃತ್ಯಕ್ಕೆ ಸಂಬಂಧಿಸಿ ಸಂಚು ರೂಪಿಸಿದ ಮನೆಯ ಕೆಲಸದಾಕೆ ಸಹಿತ ಮೂವರನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಜ.26 ರಂದು ಬಂಟ್ವಾಳ ತಾಲೂಕು ಅಮ್ಮುಂಜೆ ಗ್ರಾಮದಲ್ಲಿ ಬೆನೆಡಿಕ್ಟ್ ಕಾರ್ಲೋ [72] ಅವರ ಅಸಹಜ ಸಾವಿನ ಬಗ್ಗೆ ಇವರ ಪುತ್ರ ತಾಯಿಯನ್ನು ಕೊಲೆಗೈಯಲಾಗಿದೆ ಎಂದು ಅನುಮಾನ ವ್ಯಕ್ತಪಡಿಸಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವೈಲೆಂಟೈನ್ ಡಿʻಸೋಜಾ ರವರ ಮಾರ್ಗದರ್ಶನ, ಬಂಟ್ವಾಳ ಸಿಐ ಟಿ.ಡಿ, ನಾಗರಾಜ್ ರವರ ನೇತೃತ್ವದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆ ಪಿ.ಎಸ್.ಐ ಪ್ರಸನ್ನ. ಎಂ.ಎಸ್, ವಿಟ್ಲ ಠಾಣಾ ಪಿ.ಎಸ್.ಐ ವಿನೋದ್ ಮತ್ತವರ ತಂಡ ಪ್ರಕರಣದ ಬೆನ್ನಹತ್ತಿದ್ದರು.
ಮೃತ ಬೆನೆಡಿಕ್ಟ್ ಕಾರ್ಲೋ ಅವರನ್ನು ನೋಡಿಕೊಳ್ಳಲು ನೇಮಿಸಿದ್ದ ಅಮ್ಟಾಡಿ ಗ್ರಾಮದ ಎಲ್ಮಾ ಪ್ರಶ್ಚಿತ ಬರೆಟ್ಟೋ(25) ಎಂಬಾಕೆ ಮನೆ ಮಾಲಕಿ ಬೆನೆಡಿಕ್ಟ್ ಕಾರ್ಲೋ ಅವರ ಬಳಿ ಇದ್ದ ಬಂಗಾರವನ್ನು ದೋಚಲು ಕೊಲೆ ಸಂಚು ರೂಪಿಸಿದ್ದಳು. ಈ ಕೃತ್ಯಕ್ಕಾಗಿ ಪರಿಚಯಸ್ಥರಾದ ನರಿಕೊಂಬು ನಿವಾಸಿಗಳಾದ ಸತೀಶ ಮತ್ತು ಚರಣ್ ಎಂಬವರನ್ನು ಬಳಸಿಕೊಂಡಿದ್ದಳು. ಮೂವರು ಆರೋಪಿಗಳು ಒಟ್ಟು ಸೇರಿಕೊಂಡು ಜ. 25 ರಂದು ಮನೆಯಲ್ಲಿ ಮಲಗಿದ್ದ ಬೆನೆಡಿಕ್ಟ್ ಕಾರ್ಲೋ ರವರನ್ನು ದಿಂಬಿನಿಂದ ಉಸಿರುಗಟ್ಟಿಸಿ ಕೊಲೆಗೈದು ಚಿನ್ನಾಭರಣವನ್ನು ದೋಚಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಎಲ್ಮಾ ಪ್ರಶ್ಚಿತ ಬರೆಟ್ಟೋ, ಸತೀಶ, ಚರಣ್ ಬಂಧಿಸಲಾಗಿದ್ದು, ದೋಚಲಾದ 98 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಬಂಟ್ವಾಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.







