ಅಧಿಕಾರದಿಂದ ಕೆಳಗಿಳಿಸುತ್ತೇವೆ: ಸರಕಾರಕ್ಕೆ ರೈತ ನಾಯಕ ರಾಕೇಶ್ ಟಿಕಾಯತ್ ಎಚ್ಚರಿಕೆ

ಹೊಸದಿಲ್ಲಿ: ನವೆಂಬರ್ ತಿಂಗಳಿಂದ ದಿಲ್ಲಿ ಗಡಿಭಾಗಗಳಲ್ಲಿ ಮೂರು ಕೃಷಿ ಕಾನೂನುಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲವಾಗಿ ಹರ್ಯಾಣದ ಜಿಂದ್ ನಲ್ಲಿ ಬುಧವಾರ ನಡೆದ ಮಹಾ ಪಂಚಾಯತ್ ನಲ್ಲಿ ಭಾರೀ ಜನಸ್ತೋಮ ಸೇರಿತ್ತು. ಇಂತಹ ಮಹಾ ಪಂಚಾಯತ್ ಗಳು ಉತ್ತರಪ್ರದೇಶದ ಹಲವು ಕಡೆ ನಡೆದಿದ್ದು, ಇಂದು ಹರ್ಯಾಣದ ಜಾಟ್ ಸಮುದಾಯದ ಪ್ರಾಬಲ್ಯವಿರುವ ಸ್ಥಳದಲ್ಲಿ ನಡೆದಿದೆ.
ಹರ್ಯಾಣದ ಜಾಟ್ ಸಮುದಾಯದ ರಾಜಕೀಯದ ಕೇಂದ್ರ ಬಿಂದು ಎಂದು ಪರಿಗಣಿಸಲಾದ ಜಿಂದ್ ನಲ್ಲಿ ನಡೆದ ಮಹಾ ಪಂಚಾಯತ್ ನಲ್ಲಿ ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಭಾಷಣ ಮಾಡಿದರು.
ಟಿಕಾಯತ್ ಹಾಗೂ ಇತರ ನಾಯಕರು ವೇದಿಕೆಯಲ್ಲಿ ನಿಂತಿದ್ದಾಗ, ಭಾರ ತಾಳಲಾರದೆ ವೇದಿಕೆ ಹಠಾತ್ತನೇ ಕುಸಿದುಬಿದ್ದ ಘಟನೆ ನಡೆದಿದೆ. ಇದು ಸ್ವಲ್ಪ ಸಮಯ ಸಭೆಗೆ ಅಡಚಣೆ ಉಂಟುಮಾಡಿತ್ತು.
ಘಟನೆಯಿಂದ ಭಯಪಡದಂತೆ ಜನರಲ್ಲಿ ವಿನಂತಿಸಿದ ಉತ್ತರ ಪ್ರದೇಶದ ಜಾಟ್ ನಾಯಕ ಟಿಕಾಯತ್, ನೂತನ ಕೃಷಿ ಕಾನೂನುಗಳನ್ನು ರದ್ದುಪಡಿಸದೇ ಇದ್ದರೆ ಅಧಿಕಾರದಲ್ಲಿ ಉಳಿಯುವುದು ಕಷ್ಟ ಎಂದು ಸರಕಾರಕ್ಕೆ ಎಚ್ಚರಿಕೆ ರವಾನಿಸಿದರು.
“ನಾವು ಈ ತನಕ ಬಿಲ್ ವಾಪ್ಸಿ(ಕೃಷಿ ಕಾನೂನುಗಳನ್ನು ರದ್ದುಪಡಿಸುವುದು)ಕುರಿತು ಮಾತನಾಡಿದ್ದೇವೆ. ಸರಕಾರ ಎಚ್ಚರಿಕತೆಯಿಂದ ಆಲಿಸಬೇಕು. ಯುವಕರು ಗದ್ದಿ ವಾಪ್ಸಿಗೆ(ಅಧಿಕಾರದಿಂದ ತೆಗೆದುಹಾಕುವಂತೆ) ಕರೆ ನೀಡಿದರೆ ನೀವು ಏನು ಮಾಡುತ್ತೀರಿ'' ಎಂದು ಪ್ರಶ್ನಿಸಿದರು.







