ಹೈಕೋರ್ಟ್ ಆಕ್ಷೇಪದ ಬಳಿಕ ಜಿಐಬಿ ರಕ್ಷಣೆಗೆ ತಜ್ಞರ ಸಮಿತಿ ಪುನರ್ ರಚಿಸಿದ ಸರಕಾರ
ಬೆಂಗಳೂರು, ಫೆ.3: ರಾಜ್ಯದಲ್ಲಿರುವ ಅಪರೂಪದ ‘ಗ್ರೇಟ್ ಇಂಡಿಯನ್ ಬಸ್ಟರ್ಡ್’(ಜಿಐಬಿ) ಪಕ್ಷಿ ಸಂಕುಲದ ರಕ್ಷಣೆ ಮತ್ತು ಅಭಿವೃದ್ಧಿಗೆ ಸಲಹೆ ನೀಡಲು ರಚಿಸಲಾಗಿದ್ದ ಸಲಹಾ ಸಮಿತಿಯನ್ನು ನ್ಯಾಯಾಲಯದ ಸೂಚನೆಯಂತೆ ಪುನರ್ ರಚನೆ ಮಾಡಲಾಗಿದೆ ಎಂದು ರಾಜ್ಯ ಸರಕಾರ ಹೈಕೋರ್ಟ್‍ಗೆ ಮಾಹಿತಿ ನೀಡಿದೆ.
ಈ ಕುರಿತು ಬಳ್ಳಾರಿಯ ಪರಿಸರವಾದಿ ಎಡ್ವರ್ಡ್ ಸಂತೋ ಮಾರ್ಟಿನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರಕಾರದ ಪರ ವಕೀಲ ವಿಕ್ರಮ್ ಹುಯಿಲ್ಗೋಳ ಅವರು ಬಳ್ಳಾರಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅವರ ಮೆಮೋ ಪೀಠಕ್ಕೆ ಸಲ್ಲಿಸಿ, ತಜ್ಥರ ಸಮಿತಿಯನ್ನು ಪುನರ್ ರಚಿಸಲಾಗಿದೆ ಎಂದು ವಿವರಿಸಿದರು.
ತಜ್ಞರ ಸಮಿತಿಯಲ್ಲಿ ಬಳ್ಳಾರಿಯ ಉಪ ಅರಣ್ಯ ಸಂರಕ್ಷಾಧಿಕಾರಿ ಅಧ್ಯಕ್ಷರಾಗಿದ್ದು, ಸದಸ್ಯರಾಗಿ ವೀರಶೈವ ಕಾಲೇಜಿನ ಪ್ರಾಣಿಶಾಸ್ತ್ರ ಪ್ರಾಧ್ಯಾಪಕರಾದ ಡಾ. ಮನೋಹರ್, ವೈದ್ಯರಾದ ಡಾ. ಅರುಣ್, ಶಿರಗುಪ್ಪ ತಾಲೂಕಿನ ತಹಶೀಲ್ದಾರ್, ಬಳ್ಳಾರಿ ವಲಯ ಅರಣ್ಯಾಧಿಕಾರಿ, ಹೊಸಪೇಟೆ ಸರ್ಕಾರಿ ಕಾಲೇಜಿನ ಉಪನ್ಯಾಸಕ ಸಮದ್ ಕೊಟ್ಟೂರ್, ಸಲೀಂ ಅಲಿ ಸೆಂಟರ್ ಫಾರ್ ಆರ್ನಥಾಲಜಿ ಅಂಡ್ ನೇಚರ್ ಹಿಸ್ಟರಿ ಕೇಂದ್ರದ ಜೀವಶಾಸ್ತ್ರಜ್ಞ ಡಾ. ಎಚ್.ಎನ್ ಕುಮಾರ್, ವೈಲ್ಡ್ ಲೈಫ್ ಆಫ್ ಇಂಡಿಯಾದ ವಿಜ್ಞಾನಿ ಡಾ. ಸುತೀರ್ಥ ದತ್ತ ಅವರನ್ನು ನೇಮಿಸಲಾಗಿದೆ.
ಜನವರಿ 22ರಂದು ಅರ್ಜಿ ವಿಚಾರಣೆ ನಡೆಸಿದ್ದ ಪೀಠ, ಜಿಐಬಿ ಪಕ್ಷಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸರ್ಕಾರ ರಚಿಸಿದ್ದ ಸಲಹಾ ಸಮಿತಿ ಬಗ್ಗೆ ಹೈಕೋರ್ಟ್ ಬೇಸರ ವ್ಯಕ್ತಪಡಿಸಿತ್ತು. ಸಮಿತಿಯಲ್ಲಿನ 6 ಮಂದಿ ಸದಸ್ಯರ ಪೈಕಿ ನಾಲ್ವರು ಪಕ್ಷಿ ವಿಜ್ಞಾನ ಕ್ಷೇತ್ರಕ್ಕೆ ಸೇರಿಲ್ಲ. ಆದ್ದರಿಂದ ಸಮಿತಿಗೆ ಅರ್ಹರನ್ನು ನೇಮಕ ಮಾಡಲು, ಹಾಲಿ ಸಮಿತಿಯನ್ನು ಪುನರ್ ರಚಿಸಬೇಕೆಂದು ಸರ್ಕಾರಕ್ಕೆ ನಿರ್ದೇಶಿಸಿತ್ತು.







