ನಿವೃತ್ತ ಡಿಜಿಪಿ ಆರ್.ಪಿ.ಶರ್ಮಾ ನಿಧನ

ಬೆಂಗಳೂರು, ಫೆ.3: ರಾಜ್ಯ ಪೊಲೀಸ್ ಇಲಾಖೆಯ ನಿವೃತ್ತ ಪೊಲೀಸ್ ಮಹಾನಿರ್ದೇಶಕ(ಡಿಜಿಪಿ) ರಾಜ್ ವೀರ್ ಪ್ರತಾಪ್ (ಆರ್ ಪಿ) ಶರ್ಮಾ ಅವರು ನಿಧನೆರಾಗಿದ್ದಾರೆ.
ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಆರ್.ಪಿ.ಶರ್ಮಾ (61)ಅವರು ಹಲವು ದಿನಗಳಿಂದ ನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.ಆದರೆ ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಸಂಜೆ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬ ಸದಸ್ಯರು ಮಾಹಿತಿ ನೀಡಿದ್ದಾರೆ.
ಆರ್.ಪಿ.ಶರ್ಮಾ ಅವರು ರಾಜ್ಯ ಪೊಲೀಸ್ ವಸತಿ ನಿಗಮದ ಪೊಲೀಸ್ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿ ಕಳೆದ ಡಿಸೆಂಬರ್ ನಲ್ಲಿ ನಿವೃತ್ತರಾಗಿದ್ದರು.
ಕಳೆದ ಸೆ.2 ರಂದು ತಮ್ಮದೇ ಅನುಮತಿ ಪಡೆದ ಪಿಸ್ತೂಲ್ ಸ್ವಚ್ಛ ಗೊಳಿಸುವಾಗ ಆಕಸ್ಮಿಕವಾಗಿ ಹಾರಿದ ಗುಂಡಿನಿಂದ ಗಾಯಗೊಂಡಿದ್ದರು. ಘಟನೆ ಬಳಿಕ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಐಸಿಯುನಲ್ಲಿ ಚಿಕಿತ್ಸೆ ಪಡೆದ ಬಳಿಕ ಡಿಸ್ಚಾರ್ಜ್ ಆಗಿದ್ದರು. ಆದರೆ, ಬಹು ಅಂಗಾಗ ಬಳಲುತ್ತಿದ್ದ ಶರ್ಮಾ ಅವರು ಮತ್ತೆ ಆಸ್ಪತ್ರೆ ಸೇರಿದ್ದರು ಎಂದು ತಿಳಿದುಬಂದಿದೆ.
ಪತ್ನಿ ಹಿರಿಯ ಐಎಎಸ್ ಅಧಿಕಾರಿ ನಾಗಲಾಂಬಿಕ ದೇವಿ ಹಾಗೂ ಇಬ್ಬರು ಮಕ್ಕಳನ್ನು ಶರ್ಮಾ ಅವರು ಅಗಲಿದ್ದಾರೆ.







