ಮೊದಲ ಟೆಸ್ಟ್ನಲ್ಲಿ ಬಾಂಗ್ಲಾದ ಉತ್ತಮ ಮೊತ್ತ

ಚಟ್ಟೋಗ್ರಾಮ್:ವೆಸ್ಟ್‌ಇಂಡೀಸ್ ವಿರುದ್ಧ ಬಾಂಗ್ಲಾದೇಶ ತಂಡ ಮೊದಲ ಟೆಸ್ಟ್‌ನ ಮೊದಲ ದಿನ ಉತ್ತಮ ಸ್ಥಿತಿಯಲ್ಲಿದೆ.
ದಿನದಾಟದಂತ್ಯಕ್ಕೆ ಬಾಂಗ್ಲಾದೇಶ ತಂಡ ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್ ನಷ್ಟದಲ್ಲಿ 242 ರನ್ ಗಳಿಸಿದೆ. ಎಡಗೈ ಸ್ಪಿನ್ನರ್ ಜೋಮೆಲ್ ವಾರ್ರಿಕನ್ 58ಕ್ಕೆ ಮೂರು ವಿಕೆಟ್‌ಗಳನ್ನು ಉಡಾಯಿಸಿ ಆತಿಥೇಯರಿಗೆ ಬಲವಾದ ಸವಾಲನ್ನು ಒಡ್ಡಿದರು.
ಎಡಗೈ ಆರಂಭಿಕ ಆಟಗಾರ ಶಾದ್ಮನ್ ಇಸ್ಲಾಂ ಅರ್ಧಶತಕ(59) ಗಳಿಸಿದರು. ಟೆಸ್ಟ್‌ನಲ್ಲಿ ಇದು ಅವರ ಎರಡನೇ ಅರ್ಧಶತಕವಾಗಿದೆ.
ನಜ್ಮುಲ್ ಹುಸೈನ್ ಶಾಂಟೊ(25), ಮೊಮಿನುಲ್ ಹಕ್ (26)ಮತ್ತು ಮುಶ್ಫಿಕುರ್ರಹೀಮ್ (38) ಎರಡಂಕೆಯ ಸ್ಕೋರ್ ದಾಖಲಿಸಿದರು.
ನಜ್ಮುಲ್ ರನೌಟಾದರು. ಮೊಮಿನುಲ್ ಮತ್ತು ಮುಶ್ಫಿಕು ರ್ರಹೀಮ್‌ಗೆ ವಾರ್ರಿಕನ್ ಪೆವಿಲಿಯನ್ ಹಾದಿ ತೋರಿಸಿದರು.
ಭೋಜನಾ ವಿರಾಮದ ಹೊತ್ತಿಗೆ ಬಾಂಗ್ಲಾ 2 ವಿಕೆಟ್ ನಷ್ಟದಲ್ಲಿ 69 ರನ್ ಗಳಿಸಿತ್ತು. ತಮೀಮ್ ಇಕ್ಬಾಲ್ ಒಂಬತ್ತು ರನ್ ಗಳಿಸಿ ಕೆಮರ್ ರೋಚ್‌ಗೆ ವಿಕೆಟ್ ಒಪ್ಪಿಸಿದರು. ಎರಡನೇ ಅವಧಿಯಲ್ಲಿ ಬಾಂಗ್ಲಾದೇಶ 71 ರನ್ ಸೇರಿಸುವ ಹೊತ್ತಿಗೆ ಇನ್ನೂ ಎರಡು ವಿಕೆಟ್ ಕಳೆದುಕೊಂಡಿತು. ಅಂತಿಮ ಅವಧಿಯಲ್ಲಿ ಬಾಂಗ್ಲಾದ ಖಾತೆಗೆ 72ರನ್ ಸೇರ್ಪಡೆಗೊಂಡಿತು. ಲಿಟಾನ್ ದಾಸ್ (34) ಮತ್ತು ಶಕೀಬ್ ಅಲ್ ಹಸನ್ (39) ಆರನೇ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 49 ರನ್ ಸೇರಿಸಿದರು.
ಕೊರೋನ ವೈರಸ್ ಸೋಂಕು ಕಾಣಿಸಿಕೊಂಡ ನಂತರ ಬಾಂಗ್ಲಾದೇಶದ ಮೊದಲ ಟೆಸ್ಟ್ ಆಗಿದ್ದರೆ, ವೆಸ್ಟ್ ಇಂಡೀಸ್ ಐದು ಪಂದ್ಯಗಳನ್ನು ಆಡಿದೆ.
ವೆಸ್ಟ್ ಇಂಡೀಸ್‌ನ ಪರ ಎನ್‌ಕ್ರುಮಾ ಬೊನ್ನರ್, ಕೈಲ್ ಮೇಯರ್ಸ್ ಮತ್ತು ಶೇನ್ ಮೊಸ್ಲೆ ಮೊದಲ ಟೆಸ್ಟ್ ಆಡುತ್ತಿದ್ದಾರೆ. ಬೊನ್ನರ್ ಲೆಗ್ ಸ್ಪಿನ್ನರ್ ಆಗಿದ್ದರೆ, ಮೇಯರ್ಸ್ ಮತ್ತು ಮೊಸ್ಲೆ ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ಸರ್ವಾಂಗೀಣ ಸಾಧನೆಯೊಂದಿಗೆ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.







