ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಬಗ್ಗೆ ಭಾರತ ಇನ್ನೂ ಯೋಚಿಸುತ್ತಿಲ್ಲ: ರಹಾನೆ

ಚೆನ್ನೈ : ಲಾರ್ಡ್ಸ್‌ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲುಟಿಸಿ) ಫೈನಲ್ ಬಗ್ಗೆ ತಂಡವು ಇನ್ನೂ ಯೋಚಿಸುತ್ತಿಲ್ಲ ಎಂದು ಭಾರತದ ಟೆಸ್ಟ್ ಉಪನಾಯಕ ಅಜಿಂಕ್ಯ ರಹಾನೆ ಬುಧವಾರ ಹೇಳಿದ್ದಾರೆ.
‘‘ಇದು ಇನ್ನೂ ನಾಲ್ಕು ತಿಂಗಳುಗಳ ದೂರದಲ್ಲಿದೆ. ನಾವು ಇಂಗ್ಲೆಂಡ್ ಸರಣಿಯತ್ತ ಗಮನ ಹರಿಸಿದ್ದೇವೆ ’’ಎಂದು ರಹಾನೆ ವರ್ಚುವಲ್ ಮಾಧ್ಯಮ ಸಂವಾದದಲ್ಲಿ ಹೇಳಿದರು. ಆರೋಗ್ಯ ಕಾಳಜಿಯಿಂದಾಗಿ ಆಸ್ಟ್ರೇಲಿಯವು ದಕ್ಷಿಣ ಆಫ್ರಿಕ ಪ್ರವಾಸವನ್ನು ಅನಿರ್ದಿಷ್ಟವಾಗಿ ಮುಂದೂಡಿದ ನಂತರ ಈ ವರ್ಷ ಜೂನ್‌ನಲ್ಲಿ ನಡೆಯಲಿರುವ ಡಬ್ಲುಟಿಸಿ ಫೈನಲ್‌ಗೆ ನ್ಯೂಝಿಲ್ಯಾಂಡ್ ಅರ್ಹತೆ ಪಡೆದಿದೆ. ಇಂಗ್ಲೆಂಡ್ ಮತ್ತು ಭಾರತ ವಿಶ್ವ ಚಾಂಪಿಯನ್‌ಶಿಪ್‌ನ ಫೈನಲ್‌ಗೆ ಅರ್ಹತೆ ಪಡೆಯಲು ಪೈಪೋಟಿ ನಡೆಸುತ್ತಿದೆ. ಭಾರತಕ್ಕೆ ಕನಿಷ್ಠ 2-0 ಅಂತರದ ಗೆಲುವು ಸಾಕಾಗುತ್ತದೆ, ಆದರೆ ಇಂಗ್ಲೆಂಡ್ ಕನಿಷ್ಠ ಮೂರು ಪಂದ್ಯಗಳನ್ನು ಗೆಲ್ಲಬೇಕಾಗಿದೆ. ‘‘ಆಸ್ಟ್ರೇಲಿಯದಲ್ಲಿ ಸರಣಿ ಗೆಲುವು ವಿಶೇಷವಾಗಿತ್ತು. ಆದರೆ ಅದು ಮುಗಿದ ಅಧ್ಯಾಯ. ನಾವು ಇಂಗ್ಲೆಂಡ್ ತಂಡವನ್ನು ಗೌರವಿಸುತ್ತೇವೆ. ಅವರು ಶ್ರೀಲಂಕಾದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದ್ದರಿಂದ ನಾವು ಸಾಮರ್ಥ್ಯವನ್ನು ಬಳಸಿಕೊಂಡು ಉತ್ತಮ ಕ್ರಿಕೆಟ್ ಆಡುವುದು ನಮ್ಮ ಧ್ಯೇಯವಾಗಿದೆ’’ ಎಂದು ರಹಾನೆ ಹೇಳಿದ್ದಾರೆ. ‘‘ವಿರಾಟ್‌ಗೆ ಸಹಾಯ ಮಾಡುವುದು ನನ್ನ ಕೆಲಸ. ನನ್ನ ಕೆಲಸ ಸಾಕಷ್ಟು ಸುಲಭ’’ ಎಂದು ರಹಾನೆ ಅಭಿಪ್ರಾಯಪಟ್ಟರು.





