ಕತೆಗಾರ ಶ್ರೀಕಂಠ ಪುತ್ತೂರು ನಿಧನ

ಉಡುಪಿ, ಫೆ.4: ಸುಮಾರು 500ಕ್ಕೂ ಅಧಿಕ ಸಣ್ಣ ಕತೆಗಳನ್ನು ಬರೆದಿರುವ ನಿವೃತ್ತ ಎಲ್‌ಐಸಿ ಉದ್ಯೋಗಿ ಶ್ರೀಕಂಠ ಪುತ್ತೂರು ಇಂದು ನಸುಕಿನ ವೇಳೆ ಉಡುಪಿ ಅಜ್ಜರಕಾಡಿನ ಭಿಮಾ ನಗರದಲ್ಲಿರುವ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 93 ವರ್ಷ ಪ್ರಾಯವಾಗಿತ್ತು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಮೂಲತಃ ಕುಂಬ್ಳೆ ಸಮೀಪದ ನೀರ್ಚಾಲಿನವರಾದ ಶ್ರೀಕಂಠ ಪುತ್ತೂರು, ಪುತ್ತೂರಿನಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿ ಭಾರತೀಯ ಜೀವ ವಿಮಾ ನಿಗಮದಲ್ಲಿ ಉದ್ಯೋಗಿಯಾಗಿದ್ದರು. ಎಲ್‌ಐಸಿ ಉಡುಪಿ ವಿಭಾಗೀಯ ಕಚೇರಿಯಲ್ಲಿ ಪಬ್ಲಿಸಿಟಿ ಅಧಿಕಾರಿಯಾಗಿದ್ದು, ವೃತ್ತಿಯಿಂದ ನಿವೃತ್ತರಾದ ಬಳಿಕ ಮಣಿಪಾಲ ಫೈನಾನ್ಸ್ ಕಾರ್ಪೊರೇಶನ್‌ನಲ್ಲಿ ಕೆಲಕಾಲ ಸೇವೆ ಸಲ್ಲಿಸಿದ್ದರು.
ಉತ್ತಮ ಲೇಖಕರೂ ಆಗಿದ್ದ ಶ್ರೀಕಂಠ ಪುತ್ತೂರು ಉತ್ತಮ ಕತೆಗಾರರಾಗಿ ಗುರುತಿಸಿಕೊಂಡಿದ್ದರು. ಅವರ ಸಣ್ಣ ಕತೆಗಳು ತುಷಾರ, ಮಯೂರ ಸೇರಿದಂತೆ ನಾಡಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದವು.
Next Story





