ಮೈಸೂರು: ಪ್ರಿಯತಮೆಯನ್ನು ಕೊಲೆಗೈದು ಪ್ರಿಯಕರ ಆತ್ಮಹತ್ಯೆ

ಮೈಸೂರು, ಫೆ.4: ಪ್ರಿಯತಮೆಯನ್ನು ಹತ್ಯೆಗೈದು ವಿವಾಹಿತ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಹೆಬ್ಬಾಳ ಎಂಬಲ್ಲಿ ನಡೆದಿದೆ.
ಮಂಡ್ಯದ ಅಮೂಲ್ಯಾ(23) ಮತ್ತು ಪ್ರಿಯತಮ ಲೋಕೇಶ್ (35) ಸಾವನ್ನಪ್ಪಿದವರು. ಅಮೂಲ್ಯಾ ಎಂಸಿಎ ವಿದ್ಯಾರ್ಥಿನಿಯಾಗಿದ್ದರೆ, ಲೋಕೇಶ್ ಸಿವಿಲ್ ಗುತ್ತಿಗೆದಾರರಾಗಿದ್ದರು.
ಹೆಬ್ಬಾಳ ಬಳಿ ಇರುವ ಹೋಟೆಲ್ ವೊಂದಕ್ಕೆ ಫೆ.3ರಂದು ಮಧ್ಯಾಹ್ನ ಆಗಮಿಸಿ ರೂಂ ಪಡೆದಿದ್ದ ಇವರಿಬ್ಬರು ರಾತ್ರಿಯಾದರೂ ಕೋಣೆಯಿಂದ ಹೊರಬಂದಿರಲಿಲ್ಲ ಎನ್ನಲಾಗಿದೆ. ಇದನ್ನು ಗಮನಿಸಿದ ಹೋಟೆಲ್ ಮಾಲಕರು ಬಾಗಿಲು ತೆರೆಯಿಸಿ ನೋಡಿದಾಗ ಅಮೂಲ್ಯಾ ಕೊಲೆಯಾದ ಸ್ಥಿತಿಯಲ್ಲಿ ಹಾಗೂ ಲೋಕೇಶ್ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆನ್ನಲಾಗಿದೆ. ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಲೋಕೇಶ್ ಮತ್ತು ಅಮೂಲ್ಯಾ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಆದರೆ ಲೋಕೇಶ್ ವಿವಾಹಿತರಾಗಿದ್ದರಿಂದ ಇಬ್ಬರಲ್ಲೂ ಈ ವಿಚಾರಕ್ಕೆ ಸಂಬಂಧಿಸಿ ಆಗಾಗ್ಗೆ ವೈಮನಸ್ಸು ಉಂಟಾಗುತ್ತಿತ್ತು ಎನ್ನಲಾಗಿದೆ. ನಿನ್ನೆ ಸ್ನೇಹಿತನಿಗೆ ದೂರವಾಣಿ ಕರೆ ಮಾಡಿದ ಲೋಕೇಶ್, ಅಮೂಲ್ಯಾಳನ್ನು ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದು, ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದ ಎಂದು ತಿಳಿದು ಬಂದಿದೆ.
ವಿಷಯ ತಿಳಿದು ಡಿಸಿಪಿ ಪ್ರಕಾಶ್ ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಸಂಬಂಧ ಹೆಬ್ಬಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







