ಶಾಂತಿಯುತ ಪ್ರತಿಭಟನೆ ಪ್ರಜಾಪ್ರಭುತ್ವದ ಲಕ್ಷಣ: ರೈತರ ಹೋರಾಟದ ಕುರಿತು ಅಮೆರಿಕ ಹೇಳಿಕೆ

ಹೊಸದಿಲ್ಲಿ, ಫೆ. 4: ರೈತರ ಪ್ರತಿಭಟನೆಯ ಬಗ್ಗೆ ಬುಧವಾರ ಪ್ರತಿಕ್ರಿಯಿಸಿರುವ ಅಮೆರಿಕ, ಶಾಂತಿಯುತ ಪ್ರತಿಭಟನೆಗಳು ಬೆಳೆಯುತ್ತಿರುವ ಪ್ರಜಾಪ್ರಭುತ್ವದ ಮುದ್ರೆಯಾಗಿದೆ ಎಂದು ಹೇಳಿದೆ.
ಇದೇ ವೇಳೆ ಭಾರತೀಯ ಮಾರುಕಟ್ಟೆಯ ದಕ್ಷತೆಯ ಸುಧಾರಣೆಗೆ ಹಾಗೂ ಖಾಸಗಿ ವಲಯದಿಂದ ಅಗಾಧ ಹೂಡಿಕೆಯನ್ನು ಆಕರ್ಷಿಸಲು ಭಾರತ ಸರಕಾರ ಕೈಗೊಂಡಿರುವ ಕ್ರಮಗಳನ್ನು ಕೂಡಾ ತಾನು ಸ್ವಾಗತಿಸುವುದಾಗಿ ಅದು ಹೇಳಿದೆ.
ಈ ಬಗ್ಗೆ ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರ ಹೇಳಿಕೆಯೊಂದನ್ನು ನೀಡಿದ್ದು, ಖಾಸಗಿ ವಲಯವನ್ನು ಆಕರ್ಷಿಸುವ ಹಾಗೂ ರೈತರಿಗೆ ವಿಶಾಲ ಮಾರುಕಟ್ಟೆಯ ಲಭ್ಯತೆಯನ್ನು ಆಕರ್ಷಿಸಲು ಕೃಷಿ ವಲಯದಲ್ಲಿ ಸುಧಾರಣೆಗಳನ್ನು ತರುವ ಭಾರತ ಸರಕಾರದ ನಡೆಯನ್ನು ಬಿಡೆನ್ ಆಡಳಿತ ಬೆಂಬಲಿಸುತ್ತದೆ ಎಂದು ಹೇಳಿದ್ದಾರೆ.
ಭಾರತದಲಿ ಪ್ರಸಕ್ತ ನಡೆಯುತ್ತಿರುವ ರೈತರ ಪ್ರತಿಭಟನೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷಗಳ ನಡುವಿನ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳನ್ನು ಮಾತುಕತೆಯ ಮೂಲಕ ಬಗೆಹರಿಸುವುದನ್ನು ಅಮೆರಿಕ ಉತ್ತೇಜಿಸುತ್ತದೆಯೆಂದು ಹೇಳಿದ್ದಾರೆ.
ಈ ಮಧ್ಯೆ ಭಾರತದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಅಮೆರಿಕದ ಹಲವಾರು ಜನಪ್ರತಿನಿಧಿಗಳಿಂದ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ‘‘ಭಾರತದಲ್ಲಿ ನೂತನ ಕೃಷಿ ಸುಧಾರಣಾ ಕಾನೂನುಗಳ ವಿರುದ್ಧ ಚಳುವಳಿ ನಡೆಸುತ್ತಿರುವ ಶಾಂತಿಯುತ ಪ್ರತಿಭಟನಕಾರರ ವಿರುದ್ಧ ನಡೆದಿರುವುದಾಗಿ ವರದಿಯಾಗಿರುವ ಕಾರ್ಯಾಚರಣೆಗಳ ಬಗ್ಗೆ ತಾನು ಆತಂಕಗೊಂಡಿರುವುದಾಗಿ’’ ಅಮೆರಿಕ ಕಾಂಗ್ರೆಸ್ ಸದಸ್ಯೆ ಹ್ಯಾಲಿ ಸ್ಟೀವನ್ಸ್ ತಿಳಿಸಿದ್ದಾರೆ.
ಈ ಬಗ್ಗೆ ಹೇಳಿಕೆಯೊಂದನ್ನು ನೀಡಿರುವ ಅವರು, ನರೇಂದ್ರ ಮೋದಿ ಸರಕಾರ ಹಾಗೂ ಪ್ರತಿಭಟನಾನಿರತ ರೈತರ ಪ್ರತಿನಿಧಿಗಳು ರಚನಾತ್ಮಕ ಮಾತುಕತೆಗಳಲ್ಲಿ ತೊಡಗಬೇಕೆಂದು ಅವರು ಕರೆ ನೀಡಿದ್ದಾರೆ.
ಇನ್ನೋರ್ವ ಕಾಂಗ್ರೆಸ್ ಸದಸ್ಯೆ ಇಲ್ಹಾನ್ ಉಮರ್ ಅವರು ಕೂಡಾ ರೈತ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದು, ಭಾರತ ರೈತರ ಮೂಲಭೂತ ಪ್ರಜಾತಾಂತ್ರಿಕ ಹಕ್ಕುಗಳನ್ನು ರಕ್ಷಿಸಬೇಕು, ಮಾಹಿತಿಯ ಮುಕ್ತ ಹರಿವಿಗೆ ಅವಕಾಶ ನೀಡಬೇಕು, ಇಂಟರ್‌ನೆಟ್ ಸಂಪರ್ಕವನ್ನು ಮರುಸ್ಥಾಪಿಸಬೇಕೆಂಬುದಾಗಿ ಟ್ವೀಟ್ ಮಾಡಿದ್ದಾರೆ.
ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರ ಸೋದರ ಸೊಸೆ ಮೀನಾ ಹ್ಯಾರಿಸ್ ಕೂಡಾ ರೈತರ ಪ್ರತಿಭಟನೆಯನ್ನು ಬೆಂಬಲಿಸಿದ್ದು, ಭಾರತದ ಪ್ರಜಾಪ್ರಭುತ್ವದ ಮೇಲೆ ದಾಳಿಯಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಅಮೆರಿಕದ ಸಂಸತ್‌ಭವನದ ಮೇಲೆ ಜನವರಿ 6ರಂದು ಟ್ರಂಪ್ ಬೆಂಬಲಿಗರು ನಡೆಸಿದ ದಾಳಿಯನ್ನು ಪರೋಕ್ಷವಾಗಿ ಪ್ರಸ್ತಾವಿಸಿದ ಅವರು, ‘‘ವಿಶ್ವದ ಅತಿ ಹಳೆಯ ಪ್ರಜಾಪ್ರಭುತ್ವದ ಮೇಲೆ ದಾಳಿ ನಡೆದು ಒಂದು ತಿಂಗಳು ಕೂಡಾ ಕಳೆದಿಲ್ಲ, ಕಾಕತಾಳೀಯವೆಂಬಂತೆ ವಿಶ್ವದ ಅತ್ಯಧಿಕ ಜನಸಾಂಧ್ರತೆಯುಳ್ಳ ಪ್ರಜಾಪ್ರಭುತ್ವದ ಮೇಲೆ ದಾಳಿಯಾಗಿದೆ. ಭಾರತದ ಇಂಟರ್‌ನೆಟ್ ಸ್ಥಗಿತ ಹಾಗೂ ರೈತ ಪ್ರತಿಭಟನಾಕಾರರ ಮೇಲೆ ಅರೆಸೈನಿಕ ಪಡೆಗಳು ಹಿಂಸಾಚಾರವೆಸಗಿದ್ದು, ನಾವೆಲ್ಲರೂ ಆಕ್ರೋಶ ಭರಿತರಾಗಿದ್ದೇವೆ’’ ಎಂದಾಕೆ ಟ್ವೀಟ್ ಮಾಡಿದ್ದಾರೆ.
ಈ ಮಧ್ಯೆ ಅಮೆರಿಕ ಮೂಲದ ಸಿಖ್ಸ್ ಪಾಲಿಟಕಲ್ ಆ್ಯಕ್ಷನ್ ಕಮಿಟಿಯ ಅಧ್ಯಕ್ಷ ಗುರಿಂದರ್ ಸಿಂಗ್ ಖಾಲ್ಸಾ ಅವರು, ರೈತರ ಪ್ರತಿಭಟನೆ ಕುರಿತು ಪ್ರತ್ಯೇಕ ಹೇಳಿಕೆ ಯೊಂದನ್ನು ನೀಡಿ ಬಂಡವಾಳಶಾಹಿಗಳೊಂದಿಗೆ ಭಾರತ ಸರಕಾರದ ಮೈತ್ರಿಯ ವಿರುದ್ಧ ನಡೆಯುತ್ತಿರುವ ಅತಿ ದೊಡ್ಡ ಕ್ರಾಂತಿ ಇದಾಗಿದೆಯೆಂದು ತಿಳಿಸಿದ್ದಾರೆ.