ಉಳ್ಳಾಲ ನಗರಸಭೆಯಿಂದ ಬಾಕಿ ತೆರಿಗೆ ವಸೂಲಾತಿಗೆ ಕ್ರಮ: ಫೆ.11ರಂದು ಚಾಲನೆ
ಉಳ್ಳಾಲ, ಫೆ.4: ಉಳ್ಳಾಲ ನಗರ ಸಭಾ ವ್ಯಾಪ್ತಿಯ ಕಟ್ಟಡ, ಮನೆ, ಉದ್ಯಮಗಳ ತೆರಿಗೆ ಬಹಳಷ್ಟು ಬಾಕಿ ಉಳಿದಿದ್ದು, ಸಿಬ್ಬಂದಿ ಕೊರತೆಯಿಂದ ತೆರಿಗೆ ವಸೂಲಿ ಕಷ್ಟವಾಗುತ್ತದೆ. ಈ ಕಾರಣದಿಂದ ವ್ಯಾಪ್ತಿಯ 31 ವಾರ್ಡ್ ಗಳಲ್ಲಿರುವ ಎಲ್ಲ ಕಟ್ಟಡ, ಉದ್ಯಮ ಕೇಂದ್ರಗಳಿಗೆ ನೀಡಿ ಪರಿಶೀಲನೆ ನಡೆಸಿ ತೆರಿಗೆ ವಸೂಲಿ ಮಾಡುವ ಕಲ್ಪಿಸಲಾಗಿದೆ. ಇದಕ್ಕೆ ಫೆ.11ರಂದು ಚಾಲನೆ ನೀಡಲಾಗವುದು ಎಂದು ನಗರಸಭೆ ಉಪಾಧ್ಯಕ್ಷ ಅಯ್ಯೂಬ್ ಮಂಚಿಲ ತಿಳಿಸಿದ್ದಾರೆ.
ಅವರು ಉಳ್ಳಾಲ ನಗರ ಸಭಾ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಕಾರ್ಯಕ್ರಮಕ್ಕೆ ಫೆ.11ರಂದು ಬೆಳಗ್ಗೆ 10ಕ್ಕೆ ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿ ಚಾಲನೆ ನೀಡಲಾಗುವುದು. ಬಳಿಕ ತಿಂಗಳ ಪ್ರತಿ ಗುರುವಾರ ಒಂದೊಂದು ಕಡೆ ತೆರಿಗೆ ವಸೂಲಿ ಮಾಡಲಾಗುವುದು ಎಂದರು.
ಫೆ.18ರ ಗುರುವಾರ ಧರ್ಮ ನಗರ, ಫೆ.24ರ ಗುರುವಾರ ಅಂಬೇಡ್ಕರ್ ರಂಗ ಮಂದಿರ, ಇದರ ಬಳಿಕ ಕೋಟೆಪುರ ಟಿಪ್ಪು ಸುಲ್ತಾನ್ ಶಾಲೆ, ಮೇಲಂಗಡಿ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಮದನಿ ಜ್ಯೂನಿಯರ್ ಕಾಲೇಜು, ಬಬ್ಬುಕಟ್ಟೆ ಸರಕಾರಿ ಶಾಲೆ, ಪಟ್ಲ ಸರಕಾರಿ ಶಾಲೆ, ಮಾಸ್ತಿಕಟ್ಟೆ ಆಝಾದ್ ನಗರ ಪ್ರೌಢಶಾಲೆಯಲ್ಲಿ ಪ್ರತೀ ಗುರುವಾರ ತೆರಿಗೆ ವಸೂಲಿ ಹಾಗೂ ಸರಿಯಾದ ದಾಖಲೆ ಒದಗಿಸಿದರೆ ಸ್ಥಳದಲ್ಲೇ ಉದ್ದಿಮೆ ಪರವಾನಿಗೆ ನೀಡಲಾಗುವುದು. ಜನರ ಅನುಕೂಲಕ್ಕಾಗಿ ಈ ವ್ಯವಸ್ಥೆ ಮಾಡಲಾಗಿದೆ ಎಂದರು.
ಬೀದಿಬದಿ ವ್ಯಾಪಾರಕ್ಕೆ ಸಂಬಂಧಿಸಿದಂತೆ 536 ಮಂದಿಗೆ ಅವಕಾಶ ಇದೆ. ಇದಕ್ಕೆ ಈಗಾಗಲೇ 400ಕ್ಕೂ ಅಧಿಕ ಅರ್ಜಿಗಳು ಬಂದಿವೆ. ಈ ಪೈಕಿ ಸರಿಯಾದ ದಾಖಲೆ ಒದಗಿಸಿದ 200 ಮಂದಿಗೆ ಅವಕಾಶ ಒದಗಿಸಲಾಗಿದೆ. ಉಳಿದವರು ದಾಖಲೆ ನೀಡಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಪೌರಾಯುಕ್ತ ರಾಯಪ್ಪ ಮಾತನಾಡಿ, ನಗರ ವ್ಯಾಪ್ತಿಯ 31 ವಾರ್ಡ್ ಗಳಲ್ಲಿ ಬಹಳಷ್ಟು ಮಂದಿ ತೆರಿಗೆ ಬಾಕಿ ಇಟ್ಟಿದ್ದಾರೆ. ಈ ಕಾರಣದಿಂದ ನಾವೇ ಜನರ ಬಳಿ ತೆರಳಿ ತೆರಿಗೆ ವಸೂಲಿ ಹಾಗೂ ಸರಿಯಾದ ದಾಖಲೆ ಒದಗಿಸಿದರೆ ಸ್ಥಳದಲ್ಲೇ ಉದ್ದಿಮೆ ಪರವಾನಿಗೆ ನೀಡುವ ಯೋಜನೆ ಹಾಕಿ ಕೊಳ್ಳಲಾಗಿದೆ. ಎಪ್ರಿಲ್ ತಿಂಗಳೊಳಗೆ ತೆರಿಗೆ ಪಾವತಿ ಮಾಡಿದವರಿಗೆ ಶೇ.5ರಷ್ಟು ರಿಯಾಯಿತಿ ನೀಡಲಾಗುವುದು. ಜುಲೈ ಬಳಿಕ ಶೇ.ಎರಡರಷ್ಟು ರಿಯಾಯಿತಿ ನೀಡಲಾಗುವುದು ಎಂದರು.
ಕಚೇರಿಯಲ್ಲಿ ಸಿಬ್ಬಂದಿ ಕೊರತೆ ಇದೆ. ಜನರು ಕೆಲಸ ನಿಮಿತ್ತ ಬರುವಾಗ ಸಿಬ್ಬಂದಿ ಇರುವುದಿಲ್ಲ. ಜನರು ಕೆಲಸಕ್ಕಾಗಿ ಸಿಬ್ಬಂದಿಯನ್ನು ಕಾಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈಗ ನಗರ ಸಭೆಯಲ್ಲಿ ರೆವೆನ್ಯೂ ಆಫೀಸರ್ ಇಲ್ಲ, ಹೆಲ್ತ್ ಇನ್ಸ್ಪೆಕ್ಟರ್, ಬಿಲ್ ಕಲೆಕ್ಟರ್ ಕೊರತೆ ಇದೆ. ಹಿಂದೆ ಮೂರು ಜನ ಬಿಲ್ ಕಲೆಕ್ಟರ್ ಇದ್ದರು. ಈಗ ಒಬ್ಬರೇ ಇದ್ದಾರೆ ಎಂದರು.
ಆಲಿಯಾ ನರ್ಸಿಂಗ್ ಕಾಲೇಜಿನಲ್ಲಿ ಪರೀಕ್ಷೆಗೆ ಕೇರಳದಿಂದ ಬಂದ ವಿದ್ಯಾರ್ಥಿಗಳಿಗೆ ಆರಂಭದಲ್ಲಿ ಕೊರೊನ ಪರೀಕ್ಷೆ ಮಾಡದ ಕಾರಣ ಈ ಸಮಸ್ಯೆ ಸೃಷ್ಟಿಯಾಗಿದೆ. ಒಟ್ಟು 49 ವಿದ್ಯಾರ್ಥಿಗಳಿಗೆ ಸೋಂಕು ಇದೆ. ಕ್ವಾರಂಟೈನ್ ವ್ಯವಸ್ಥೆ ಮಾಡಲಾಗಿದೆ. ಸಮುದಾಯ ಆರೋಗ್ಯ ಕೇಂದ್ರದಿಂದ ಔಷಧ, ಆಹಾರದ ವ್ಯವಸ್ಥೆ ಮಾಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ನಗರ ಸಭೆ ಅಧ್ಯಕ್ಷೆ ಚಿತ್ರಕಲಾ ಉಪಸ್ಥಿತರಿದ್ದರು.







