‘ಆರ್ಥಿಕ ಇಲಾಖೆ ನಿರ್ಬಂಧ'ಕ್ಕೆ ಕಲ್ಯಾಣ ಕರ್ನಾಟಕ ಭಾಗದ ಶಾಸಕರ ಕಿಡಿ

ಬೆಂಗಳೂರು,ಫೆ. 4: ಕಲ್ಯಾಣ ಕರ್ನಾಟಕ ಭಾಗದಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ಕೋವಿಡ್-19 ಸೋಂಕಿನ ಕಾರಣ ಮುಂದಿಟ್ಟು ‘ಆರ್ಥಿಕ ಇಲಾಖೆಯ ನಿರ್ಬಂಧ' ಹೇರಿರುವುದಕ್ಕೆ ಆ ಭಾಗದ ಶಾಸಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಕೂಡಲೇ ನಿರ್ಬಂಧ ತೆರವು ಮಾಡಿ ಶಿಕ್ಷಕರ ನೇಮಕ ಮಾಡಬೇಕು ಎಂದು ಆಗ್ರಹಿಸಿದರು.
ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್ ಸದಸ್ಯ ಈಶ್ವರ್ ಖಂಡ್ರೆ ಕೇಳಿದ ಪ್ರಶ್ನೆಗೆ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಅವರ ಪರವಾಗಿ ಸಚಿವ ಸುರೇಶ್ ಕುಮಾರ್ ನೀಡಿದ ಉತ್ತರದಿಂದ ಆಕ್ಷೇಪ ವ್ಯಕ್ತಪಡಿಸಿದ ಖಂಡ್ರೆ, ರಾಜಶೇಖರ್ ಪಾಟೀಲ್, ಭೀಮಾನಾಯ್ಕ್, ಪರಮೇಶ್ವರ್ ನಾಯ್ಕ್, ಅಮರೇಗೌಡ ಬೈಯಾಪುರ, ಪ್ರಿಯಾಂಕ್ ಖರ್ಗೆ ಸೇರಿ ಇನ್ನಿತರರು, ಆರ್ಥಿಕ ಇಲಾಖೆ ನಿರ್ಬಂಧ ತೆರವು ಮಾಡಿ ಎಂದು ಒತ್ತಾಯಿಸಿದರು.
ರಾಜ್ಯದ ಯಾವುದೇ ಜಿಲ್ಲೆಗಳಲ್ಲಿ ನೇಮಕಾತಿ ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಆರ್ಥಿಕ ಇಲಾಖೆ ನಿರ್ಬಂಧವಿಲ್ಲ. ಆದರೆ, ಕೇವಲ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾತ್ರ ನೇಮಕಾತಿಗೆ ಆರ್ಥಿಕ ಇಲಾಖೆ ನಿರ್ಬಂಧ ಹಾಕಿದೆಯೇ? ನಮ್ಮ ಭಾಗಕ್ಕೆ ಮಾತ್ರ ಏಕೆ ಇಂತಹ ತಾರತಮ್ಯ. ಕಲ್ಯಾಣ ಕರ್ನಾಟಕ ಭಾಗಕ್ಕೆ ಅನ್ಯಾಯ ಮಾಡುವುದು ಸರಿಯಲ್ಲ ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಶಿಕ್ಷಣದಲ್ಲಿ ಅತ್ಯಂತ ಹಿಂದುಳಿದಿದೆ. ಶಿಕ್ಷಕರ ಕೊರತೆ ಇದ್ದರೆ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಸದಸ್ಯರು, ಆ ಭಾಗದ ಶಿಕ್ಷಣ ಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಕಾಲಮಿತಿಯಲ್ಲಿ ಆರ್ಥಿಕ ಇಲಾಖೆ ನಿರ್ಬಂಧವನ್ನು ತೆರವುಗೊಳಿಸಬೇಕು ಎಂದು ಮನವಿ ಮಾಡಿದರು.
ಬಳಿಕ ಉತ್ತರ ನೀಡಿದ ಸುರೇಶ್ ಕುಮಾರ್, ಆರ್ಥಿಕ ಇಲಾಖೆಗೆ ನಿರ್ಬಂಧ ತೆರವುಗೊಳಿಸುವಂತೆ ನಿರ್ದೇಶನ ನೀಡಲು ಸಾಧ್ಯವಿಲ್ಲ. ಆದಷ್ಟು ಶೀಘ್ರವೇ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಿದ್ದೇವೆ. ಕಲ್ಯಾಣ ಕರ್ನಾಟಕದಲ್ಲಿ 80 ಸರಕಾರಿ 49 ಅನುದಾನಿತ ಸೇರಿದಂತೆ ಒಟ್ಟು 129 ಪದವಿ ಕಾಲೇಜುಗಳಿವೆ. ಆ ಪೈಕಿ ಸರಕಾರಿ ಕಾಲೇಜುಗಳಲ್ಲಿ 1,438 ಹುದ್ದೆಗಳ ಪೈಕಿ 967 ಹುದ್ದೆಗಳನ್ನು ಭರ್ತಿ ಮಾಡಲಾಗಿದ್ದು, 471 ಹುದ್ದೆಗಳು ಖಾಲಿ ಇವೆ. ಅನುದಾನಿತ ಕಾಲೇಜುಗಳಲ್ಲಿ 629 ಹುದ್ದೆ ಭರ್ತಿ ಮಾಡಲಾಗಿದ್ದು, ಉಳಿದ ಹುದ್ದೆಗಳು ಖಾಲಿಯಿವೆ. ಶೀಘ್ರದಲ್ಲೇ ಇವುಗಳನ್ನು ಭರ್ತಿ ಮಾಡಲಾಗುವುದು ಎಂದರು.







